ಬೆಂಗಳೂರು : ಪ್ರತಿ ಮಳೆಗೆ ಮಾನ್ಯತಾ ಟೆಕ್ ಪಾರ್ಕ್ ಮುಳುಗಡೆಯಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಮಾನ್ಯತಾ ಟೆಕ್ ಪಾರ್ಕ್ ನ ಜಲಪ್ರವಾಹ ತಡೆಗೆ ಅಧಿಕಾರಿಗಳು ಯೋಜನಾ ವರದಿ ಸಿದ್ದಪಡಿಸಿದ್ದಾರೆ. ಖಾಸಗಿ ಕಂಪೆನಿಗಳ ಅವಾಂತರದಿಂದ ಈ ಸಮಸ್ಯೆ ಉಲ್ಬಣವಾಗಿದೆ ಎಂಬ ಆರೋಪವಿದೆ.
ಈ ಸಂಬಂಧಿಸಿದಂತೆ ಮೇ 29ರಂದು ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಖಾಸಗಿ ಕಂಪನಿಗಳ ಹಿರಿಯ ಅಧಿಕಾರಿಗಳು, ಸ್ಥಳೀಯರು ಮತ್ತು ಭೂಮಾಲೀಕರೊಂದಿಗೆ ಸಭೆ ನಡೆಸಲಾಗಿತ್ತು. ಯೋಜನಾ ವರದಿ ಸಲ್ಲಿಸಿದ್ದ ಅಧಿಕಾರಿಗಳು ಸೂಕ್ತ ಕ್ರಮ ವಹಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದರು. ಟೆಕ್ ಪಾರ್ಕ್ಗಳ ಒತ್ತುವರಿ ಮತ್ತು ಸರ್ಕಾರದ ತಪ್ಪುಗಳು ವರದಿಯಲ್ಲಿ ಬಹಿರಂಗವಾಗಿತ್ತು.
ಕಂದಾಯ ಅಧಿಕಾರಿಗಳು ಸಿದ್ಧಪಡಿಸಿರುವ ಎಕ್ಸ್ಕ್ಲೂಸಿವ್ ವರದಿ ಕರ್ನಾಟಕ ನ್ಯೂಸ್ ಬೀಟ್ ಗೆ ಲಭ್ಯವಾಗಿದೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮುನೀಶ್ ಮೌದ್ಗಿಲ್, ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿ ಸೂಕ್ತ ಕ್ರಮಕ್ಕೆ ಬಿಬಿಎಂಪಿಗೆ ಸಲ್ಲಿಕೆ ಮಾಡಿದ್ದರು.
ಜಲಾವೃತ ತಡೆಗೆ ಒಳಚರಂಡಿ ಮತ್ತು ರಾಜ ಕಾಲುವೆಗಳ ಯೋಜನೆ ರೂಪಿಸುವ ಬಗ್ಗೆ ಕಂದಾಯ ಇಲಾಖೆ ಸಲಹೆ ನೀಡಿತ್ತು. ಸರ್ವೇಯಲ್ಲಿ ರಾಜಕಾಲುವೆಗಳ ಬಫರ್ ಜೋನ್ ಮತ್ತು ನೀರಗಾಲುವೆಗಳ ಒತ್ತುವರಿಯೇ ಜಲಪ್ರವಾಹಕ್ಕೆ ಕಾರಣ ಎಂಬ ಅಂಶ ಬಾಟಬಯಲಾಗಿದೆ. ಆಯಾ ಪ್ರಾಧಿಕಾರಿಗಳು ಮತ್ತು ಭ್ರಷ್ಟ ಅಧಿಕಾರಿಗಳ ತಪ್ಪುಗಳು ಕೂಡ ವರದಿಯಲ್ಲಿ ಬಹಿರಂಗವಾಗಿದೆ. KIADB ಮತ್ತು ಟೌನ್ ಪ್ಲಾನಿಂಗ್ ಇಲಾಖೆಗಳ ನಿರ್ಲಕ್ಷ್ಯವೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಾಗಾದರೇ, ಸಮಿತಿ ಸರ್ಕಾರಕ್ಕೆ ನೀಡಲಾದ ಸಲಹೆಗಳೇನು ? :
• ಮಾನ್ಯತಾ ಟೆಕ್ಪಾರ್ಕ್ಗೆ ಹತ್ತಿರದ ದೊಡ್ಡ ರಾಜುಕಾಲುವೆಗೆ ಮಳೆನೀರು ಸರಾಗವಾಗಿ ಹರಿದುಹೋಗುವಂತೆ ವಿನ್ಯಾಸವನ್ನು ಮಾಡಬೇಕು.
• ಹತ್ತಿರದ ದೊಡ್ಡ ರಾಜುಕಾಲುವೆಗೆ ನೀರನ್ನು ಹರಿಸಲು ಸರ್ವೆ ಸ್ಕೆಚ್ಗೆ ಅನುಗುಣವಾಗಿ ಚರಂಡಿಗಳು, ನೀರಿಗಾಲುವೆಗಳ ರಚನೆ ಮಾಡಬೇಕು.
• ನಾಗವಾರ ಕೆರೆಯಿಂದ ಕಲ್ಕೆರೆ ಕೆರೆಗೆ ಹರಿಯುವ ರಾಜಕಾಲುವೆಗೆ ಮಾನ್ಯತಾ ಟೆಕ್ಪಾರ್ಕ್ನ ನೀರುಗಾಲುವೆಗಳನ್ನು ಸಂಪರ್ಕಿಸುವಂತೆ ಮಾಡಬೇಕು.
• ರಾಜಕಾಲುವೆಯಲ್ಲಿ ಬಹಳಷ್ಟು ಹೂಳು ತುಂಬಿದ್ದು ಮೊದಲು ಅದನ್ನು ಸ್ವಚ್ಛಗೊಳಿಸಬೇಕಿದೆ.
• ರಾಜುಕಾಲುವೆ ಸುತ್ತಲಿನ ಬಫರ್ ಜೋನ್ ನಿರ್ವಹಣೆ ಮಾಡಬೇಕು. ಯಾಕಂದರೆ ಇಡೀ ಪ್ರದೇಶದ ನೀರು ಅಲ್ಲಿ ತುಂಬಿ ಹರಿಯಬಹುದು.
• ದಾಖಲೆಗಳನ್ನು ಪರಿಶೀಲಿಸಲಾಗಿ ಹಲವಾರು ನೀರುಗಾಲುವೆಗಳು ಮತ್ತು ಬಫರ್ ಜೋನ್ ಮೇಲೆ ಅತಿಕ್ರಮವಾಗಿ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ.
• ಸ್ಯಾಟಲೈಟ್ ಇಮೇಜಸ್ ಅಸ್ಪಷ್ಟತೆಯಿಂದ ಕೂಡಿದ್ದು, ಒತ್ತುವರಿ ಕಟ್ಟಡಗಳ ಗುರುತಿಸಲು ಸಾಧ್ಯವಾಗಿಲ್ಲ.
• ಕರ್ನಾಟಕ ಸರ್ಕಾರವೇ ನೀರಿನ ಚರಂಡಿಗಳನ್ನು 2020 ರಲ್ಲಿ ಮಾರಾಟ ಮಾಡಿದೆ.
• 2020 ರ ತಿದ್ದುಪಡಿ ಕಾಯ್ದೆ 44 ರಂತೆ ಕೆಎಲ್ಆರ್ ಕಾಯ್ದೆ 1964 ರ ತಿದ್ದುಪಡಿಯಾಗಿ ಪರಿಚಯಿಸಲಾದ ಸೆಕ್ಷನ್ 69-ಎ ಅಡಿಯಲ್ಲಿ ಎಂ/ಎಸ್ ಕಾರ್ಲೆಗೆ ಮಾರಾಟ ಮಾಡಲಾಗಿದೆ.
• ಇನ್ನುಳಿದ ನೀರುಗಾಲುವೆಗಳನ್ನು M/S ಮಾನ್ಫೋ, M/S ಮಾನ್ಯತಾ ಮತ್ತು M/S ಎಬಿಸು ಟೆಕ್ ಪಾರ್ಕ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರು ಕಟ್ಟಡಗಳನ್ನು ನಿರ್ಮಿಸಿ ಕಾಲುವೆಗಳನ್ನು ಬ್ಲಾಕ್ ಮಾಡಿದ್ದಾರೆ.
• ದಶಕಗಳ ಹಿಂದೆ ಈ ಎಲ್ಲಾ ಕಟ್ಟಡಗಳು ಕೃಷಿ ಭೂಮಿಗಳಾಗಿದ್ದವು.
• ಕಟ್ಟಡಗಳು ಮತ್ತು ವಾಣಿಜ್ಯ ಚಟುವಟಿಕೆಗಳಿಂದ ಕೃಷಿ ಭೂಮಿಯಲ್ಲಿ ಹಾದುಹೋಗಿದ್ದ ನೈಸರ್ಗಿಕ ನೀರಿನ ಹರಿವಿಗೆ ಅಡ್ಡಿಪಡಿಸಲಾಗಿದೆ.
• ದಾಖಲೆಯಲ್ಲಿರುವ ಚರಂಡಿಗಳನ್ನು ಸಹ ಅಡ್ಡಿಪಡಿಸಿ ಅವುಗಳ ಮೇಲೆ ಕಟ್ಟಡಗಳ ನಿರ್ಮಿಸಲಾಗಿದೆ.
• ಇದೀಗ ರಾಜಕಾಲುವೆ ಸಂಪರ್ಕಿಸುವ ನೀರುಗಾಲುವೆಗಳ ನಿರ್ಮಾಣ ಅತ್ಯಗತ್ಯವಾಗಿದ್ದು, ಇದ್ರ ಸಂಪೂರ್ಣ ವೆಚ್ಚ ಒತ್ತುವರಿ ಮಾಡಿರುವ ಖಾಸಗೀ ಕಂಪನಿಗಳಿಂದಲೇ ಭರಿಸಬೇಕು.
• ನೀರುಗಾಲುವೆಗಳ ನಿರ್ಮಾಣಕ್ಕೆ ಭೂಮಿಯನ್ನು ಎಲ್ಲಾ ಖಾಸಗೀ ಕಂಪನಿಗಳೇ ಸಮಾನವಾಗಿ ಉಚಿತವಾಗಿ ನೀಡಬೇಕು .
• ಮಾನ್ಯತಾ ಟೆಕ್ ಪಾರ್ಕ್ ಒಳಗೆ ಹಾಕಲಾದ ಕಾಂಕ್ರೀಟ್ ಮತ್ತು ನಿರ್ಮಾಣ ಕಾರ್ಯಗಳಿಂದಲೂ ಜಲಾವೃತಕ್ಕೆ ಕಾರಣವಾಗಿದೆ.
• ನೀರು ನಿಲ್ಲುವ ಪ್ರದೇಶಗಳಿಂದ ನೀರುಗಾಲುವೆಗಳ ನಿರ್ಮಿಸಿ ಇಳಿಜಾರಿನ ಮೂಲಕ ಡೊಡ್ಡ ರಾಜಕಾಲುವೆಗೆ ಸಂಪರ್ಕಿಸುವಂತೆ ವಿನ್ಯಾಸ ಮಾಡಬೇಕು.
• ನೀರುಗಾಲುವೆಗಳ ನಿರ್ಮಾಣಕ್ಕಾಗಿ ಯಾವುದೇ ಮುಖ್ಯ ಕಟ್ಟಡಗಳ ಡೆಮಾಲಿಶನ್ ಮಾಡುವುದು ಅಗತ್ಯವಿಲ್ಲ.
• ಕಟ್ಟಡಗಳ ಗಡಿ ಭಾಗದ ಮೂಲಕ ನೀರುಗಾಲುವೆಗಳ ನಿರ್ಮಾಣ ಮಾಡಲು ಸಾಧ್ಯವಿದೆ..
• KIADB ಮತ್ತು ಟೌನ್ ಪ್ಲಾನಿಂಗ್ ನಿರ್ಲಕ್ಷ್ಯ ಮಾನ್ಯತಾ ಟೆಕ್ಪಾರ್ಕ್ ಜಲಾವೃತಕ್ಕೆ ಪ್ರಮುಖ ಕಾರಣ.