ಬೆಂಗಳೂರು: ಕೇಂದ್ರ ಸರ್ಕಾರವು ಪ್ರತಿಯೊಂದು ಸ್ಮಾರ್ಟ್ ಫೋನ್ ನಲ್ಲಿ ಸಂಚಾರ್ ಸಾಥಿ ಆ್ಯಪ್ ಇರಬೇಕು ಎಂದು ಆದೇಶ ಹೊರಡಿಸಿ, ಈಗ ಕಡ್ಡಾಯವಲ್ಲ ಎಂದು ತಿಳಿಸಿದೆ. ಆ್ಯಪ್ ಕಡ್ಡಾಯವಾಗಿ ಇರಬೇಕೋ, ಇರಬಾರದೋ ಎಂಬ ಚರ್ಚೆ ಬಿಡಿ. ನಿಮ್ಮ ಮೊಬೈಲ್ ನಲ್ಲಿ ಸಂಚಾರ್ ಸಾಥಿ ಆ್ಯಪ್ ಏಕೆ ಇರಬೇಕು? ಇದರಿಂದ ಏನು ಉಪಯೋಗಗಳಿವೆ ಎಂಬುದನ್ನು ತಿಳಿದುಕೊಳ್ಳಿ. ಇದಾದ ಬಳಿಕ ನೀವು ಆ್ಯಪ್ ಡೌನ್ ಲೋಡ್ ಮಾಡಬೇಕೋ? ಬೇಡವೋ ಎಂಬುದನ್ನು ತೀರ್ಮಾನಿಸಬಹುದು.
ಹಾಗೆ ನೋಡಿದರೆ, ಮೊಬೈಲ್ ನಲ್ಲಿ ಸಂಚಾರ್ ಸಾಥಿ ಆ್ಯಪ್ ಇರುವುದು ಒಳ್ಳೆಯದು. ಕಳೆದುಹೋದ ಅಥವಾ ಕಳ್ಳತನವಾದ ಫೋನ್ ಗಳನ್ನು ಬ್ಲಾಕ್ ಮಾಡಲು ಮತ್ತು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಬಳಕೆದಾರರ ಹೆಸರಿನಲ್ಲಿರುವ ನಕಲಿ ಮೊಬೈಲ್ ಸಂಪರ್ಕಗಳನ್ನು ಗುರುತಿಸಿ, ಅವುಗಳನ್ನು ಕಡಿತಗೊಳಿಸಲು ಸಹ ಅವಕಾಶ ನೀಡುತ್ತದೆ.
ಪ್ರಸಕ್ತ ವರ್ಷದಲ್ಲಿಯೇ ಸಂಚಾರ್ ಸಾಥಿ ಆ್ಯಪ್ ಮೂಲಕ 7 ಲಕ್ಷಕ್ಕೂ ಹೆಚ್ಚು ಕಳೆದುಹೋದ ಫೋನ್ಗಳನ್ನು ಪತ್ತೆಹಚ್ಚಲು ಸಹಾಯ ಮಾಡಿದೆ. ಹಾಗೆಯೇ, ಸುಮಾರು 37 ಲಕ್ಷ ಕದ್ದ ಫೋನ್ಗಳನ್ನು ಬ್ಲಾಕ್ ಮಾಡಿದೆ ಎಂದು ಸರ್ಕಾರವೇ ಮಾಹಿತಿ ನೀಡಿದೆ. ಹಾಗಾಗಿ, ಇದನ್ನು ಡೌನ್ ಲೋಡ್ ಮಾಡಿಕೊಳ್ಳುವುದರಿಂದ ಅನುಕೂಲವೇ ಇದೆ ಅಂತಾಯಿತು. ಮೊಬೈಲ್ ಕಳೆದುಹೋದರೆ, ಕಳ್ಳತನವಾದರೆ, ಅದನ್ನು ಪತ್ತೆಹಚ್ಚಲು ಇದು ನೆರವು ನೀಡುತ್ತದೆ.
ಸಂಚಾರ್ ಸಾಥಿ ಆ್ಯಪ್ ಅನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದ ಬಳಿಕ ಜನರಿಂದ ಡೌನ್ ಲೋಡ್ ಮಾಡಿಕೊಳ್ಳುವ ಪ್ರಮಾಣ ಜಾಸ್ತಿಯಾಗಿದೆ. ಈಗಾಗಲೇ 20 ಕೋಟಿ ಜನ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ನಿತ್ಯ ಸರಾಸರಿ 60 ಸಾವಿರ ಇದ್ದ ಡೌನ್ ಲೋಡ್ ಪ್ರಮಾಣವೀಗ 6 ಲಕ್ಷಕ್ಕೆ ಏರಿಕೆಯಾಗಿದೆ. ನಿಮ್ಮ ಮೊಬೈಲ್ ಕಳೆದುಹೋದರೆ, https://www.ceir.gov.in ಗೆ ಭೇಟಿ ನೀಡಿ, ಅಲ್ಲಿ ಐಎಂಇಐ ನಂಬರ್ ನಮೂದಿಸುವ ಮೂಲಕ ಅದನ್ನು ಬ್ಲಾಕ್ ಮಾಡಿಸಬಹುದಾಗಿದೆ.
ಇದನ್ನೂ ಓದಿ: ಕರ್ನಾಟಕದ ‘ರಾಜಭವನ’ ಇನ್ಮುಂದೆ ‘ಲೋಕಭವನ’.. ಹೆಸರು ಬದಲಾವಣೆಗೆ ಕಾರಣವೇನು?



















