ಗಣೇಶ ಹಬ್ಬ ಬಂದ್ರೆ ಸಾಕು..ಎಲ್ಲೆಡೆ ಗಣಪತಿ ಬಪ್ಪಾ ಮೋರಯಾ…ಗಣಪತಿ ಬಪ್ಪಾ ಮೋರಯಾ ಎಂಬ ಘೋಷಣೆ ಮೊಳಗುತ್ತಿರುತ್ತದೆ. ಹಾಗಾದ್ರೆ ಈ ಗಣಪತಿ ಬಪ್ಪಾ ಮೋರಯಾ ಅಂದ್ರೆ ಏನು? ಯಾಕೆ ಹೀಗೆ ಗಣೇಶನ ಮುಂದೆ ಹೇಳಲಾಗುತ್ತದೆ? ಗಣೇಶನಿಗೂ ಈ ಘೋಷಣೆ ಯಾಕೆ ಇಷ್ಟ?..ಹಾಗಾದರೆ ಗಣಪತಿ ಬಪ್ಪಾ ಮೋರಯಾ ಎಂಬುವುದರ ಅರ್ಥ ಏನು? ಅದರ ಹಿನ್ನೆಲೆ ಏನು? ಎಂಬುವುದನ್ನು ತಿಳಿದುಕೊಳ್ಳೋಣ…
ಮೋರಯಾ ಮೂಲ ಕಥೆ 15 ನೇ ಶತಮಾನದ ‘ಮೋರಯಾ ಗೋಸಾವಿ’ ಎಂಬ ಸಂತರೊಬ್ಬರಿಂದ ಬಂದಿದೆ ಎಂಬ ನಂಬಿಕೆ ಇದೆ. ಮಹಾರಾಷ್ಟ್ರದ ಪುಣೆ ಹತ್ತಿರದ ಚಿಂಚ್ ವಾಡಿ ಎಂಬ ದೂರದ ಹಳ್ಳಿಯಲ್ಲಿ ಮೋರಯಾ ಗೋಸಾವಿ ಎಂಬ ಸಂತ ವಾಸ ಮಾಡುತ್ತಿದ್ದರು. ಅವರು ಗಣಪತಿಯ ಮಹಾ ಭಕ್ತ. ಒಂದು ದಿನ ಮೋರಾಯಗೆ ಗಣೇಶ ಕನಸಿನಲ್ಲಿ ಬಂದು ನದಿಯಲ್ಲಿ ತನ್ನ ವಿಗ್ರಹ ಇರುವುದಾಗಿ ಹೇಳುತ್ತಾನೆ.
ಜನ ನಂಬಲ್ಲ. ಮೋರಾಯ ನಂಬಿಸಿ, ನದಿಯಲ್ಲಿ ಗಣೇಶ ಇರುವುದನ್ನು ಪತ್ತೆ ಮಾಡುತ್ತಾನೆ. ಈ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿ ಜನರು ತಂಡೋಪತಂಡವಾಗಿ ಬಂದು ನೋಡುತ್ತಾರೆ. ಆಗ ಮೋರಯಾ ಗೋಸಾವಿಯ ಪಾದಗಳನ್ನು ಮುಟ್ಟಿ ಮೋರಯಾ ಹೇಳುತ್ತಾರೆ. ಭಕ್ತರ ಮೂಲಕ ಗಣೇಶ ಹಲವು ಕೆಲಸ ಮಾಡಿಸುತ್ತಾನೆ ಎಂಬುವುದಕ್ಕೆ ಮೋರಾಯನ ಬದುಕು ಕೂಡ ಸಾಕ್ಷಿಯಂತೆ. ಹೀಗಾಗಿಯೇ ಜನರು ಅಂದಿನಿಂದ ಇಂದಿನವರೆಗೆ ಗಣಪತಿ ಬಪ್ಪಾ ಮೋರಯಾ ಎಂದು ಹೇಳುತ್ತಾ ಬರುತ್ತಿದ್ದಾರೆಂಬ ಪ್ರತೀತಿ ಇದೆ. ಮರಾಠಿಯಲ್ಲಿ ‘ಗಣಪತಿ ಬಪ್ಪಾ ಮೋರಯಾ’ ಎಂದು ಹೇಳಲಾಗುತ್ತದೆ. ಏಕೆಂದರೆ ಗಣಪತಿ ವಿಗ್ರಹವು ಮಹಾರಾಷ್ಟ್ರದ ಪುಣೆ ಬಳಿಯ ನದಿಯಲ್ಲಿ ಮೋರಯಾ ದಿಂದ ಪತ್ತೆಯಾಗಿದೆ ಎಂಬುವುದು ಕೂಡ ಭಕ್ತರ ನಂಬಿಕೆಯಾಗಿದೆ.