ದಾವಣಗೆರೆ: ನಾಲೈದು ಬಾರಿ ಸಂಸದರಾಗಿ ಆಯ್ಕೆ ಆಗಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವ ಕೇಂದ್ರದ ಮಾಜಿ ಸಚಿವರು (ಜಿ.ಎಂ.ಸಿದ್ದೇಶ್ವರ) ಜಿಲ್ಲೆಯ ಅಭಿವೃದ್ಧಿಗೇನು ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ್, ‘ಸ್ಮಾರ್ಟ್ ಸಿಟಿ, ಕಸ ವಿಲೇವಾರಿ ಘಟಕವನ್ನು ಒಳಗೊಂಡಂತೆ ಹಲವು ಯೋಜನೆಗಳನ್ನು ಪ್ರಸ್ತಾಪಿಸಿ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸ್ಮಾರ್ಟ್‌ಸಿಟಿ ಯೋಜನೆಗೆ ದಾವಣಗೆರೆ ಸೇರ್ಪಡೆಯಾಗಿದ್ದು ಹೇಗೆ ಎಂಬುದನ್ನು ಅವರು ಮರೆತಿರುವಂತಿದೆ. ಕಸ ವಿಲೇವಾರಿ ಘಟಕದ ಪರಿಕಲ್ಪನೆಯೂ ಅವರದ್ದಲ್ಲ’ ಎಂದು ಹರಿಹಾಯ್ದಿದ್ದಾರೆ.
ಇನ್ನು, ‘ಅಶೋಕ ಚಿತ್ರಮಂದಿರದ ಸಮೀಪದಲ್ಲಿ ರೈಲ್ವೆ ಹಳಿಗೆ ನಿರ್ಮಿಸಿದ ಕೆಳಸೇತುವೆ ಕಾಮಗಾರಿಯೇ ಅವರ (ಸಿದ್ದೇಶ್ವರ) ಅವೈಜ್ಞಾನಿಕ ಯೋಜನೆಗೆ ಹಿಡಿದ ಕೈಗನ್ನಡಿ. ಇದಕ್ಕೆ ಪರ್ಯಾಯವಾಗಿ ಮತ್ತೊಂದು ಸೇತುವೆ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ’ ಎಂದು ವರದಿಗಾರರೊಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
‘ಜಿಲ್ಲಾ ಕಾರಾಗೃಹವನ್ನು ತುರ್ಚಘಟ್ಟಕ್ಕೆ ಸ್ಥಳಾಂತರಿಸುವ ಆಲೋಚನೆ ಇದೆ. ಆಗ ಲಭ್ಯವಾಗುವ ವಿಶಾಲ ಸ್ಥಳದಲ್ಲಿ ಉಪನೋಂದಣಾಧಿಕಾರಿ ಕಚೇರಿ ಹಾಗೂ ಸರ್ವೆ ಇಲಾಖೆಗೆ ಕಟ್ಟಡ ನಿರ್ಮಿಸುವ ಯೋಜನೆ ಇದೆ. ತಹಶೀಲ್ದಾರ್ ಕಚೇರಿಯೂ ಇಲ್ಲಿಯೇ ಇರುವುದರಿಂದ ಜನರಿಗೆ ಅನುಕೂಲವಾಗಲಿದೆ’ ಎಂದು ಹೇಳಿದ್ದಾರೆ.
‘ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಮರುನಿರ್ಮಾಣ ಮಾಡಲಾಗುತ್ತಿದೆ. ವೈದ್ಯಕೀಯ ಸಿಬ್ಬಂದಿಯ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಹೃದ್ರೋಗ ಸೇರಿ ಇತರ ತಜ್ಞರ ಅಲಭ್ಯತೆ ಇದ್ದಾಗ ಮಾತ್ರ ಖಾಸಗಿ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುತ್ತಿದೆ. ಔಷಧಕ್ಕೆ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಟ್ರಾಮಾ ಕೇರ್ ಸೆಂಟರ್ ಕಾರ್ಯಾರಂಭಕ್ಕೆ ಪ್ರಯತ್ನಿಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.
‘2010ರಲ್ಲಿ ನಡೆದ ಅಕ್ರಮ ಗಣಿಗಾರಿಕೆ ಹಾಗೂ ಅಕ್ರಮ ಅದಿರು ಸಾಗಣೆಗೆ ಸಂಬಂಧಿಸಿದಂತೆ ಸಚಿವ ಎಚ್.ಕೆ. ಪಾಟೀಲ್ ಪತ್ರ ಬರೆದಿದ್ದಾರೆ. ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಏಕ ಸದಸ್ಯ ಆಯೋಗದ ಜೊತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವ ಪ್ರಯತ್ನ ಮಾಡುತ್ತಿದೆ. ಸರ್ಕಾರದ ಬೊಕ್ಕಸಕ್ಕಾಗಿರುವ ನಷ್ಟ ವಸೂಲಿಗೆ ಕ್ರಮ ವಹಿಸಲಿದೆ’ ಎಂದಿದ್ದಾರೆ.