ಜಾತಿ ಜನಗಣತಿ ಅಪಸ್ವರ ಹಾಗೂ ಅಂಕಿ-ಅಂಶ ಗೊಂದಲಗಳ ನಿವಾರಣೆಗೆ ಮತ್ತೊಮ್ಮೆ ಸಮೀಕ್ಷೆಗೆ ಹೈಕಮಾಂಡ್ ಸೂಚಿಸಿದ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ.
ಎಐಸಿಸಿ ಸಭೆಯಲ್ಲಿ ತೀರ್ಮಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಾಂಶವು ಸುಮಾರು 10 ವರ್ಷ ಹಳೆಯದಾಗಿದೆ. ಪ್ರತಿಯೊಂದು ವರ್ಗದ ಪ್ರಮುಖರಿಗೂ ಈ ಬಗ್ಗೆ ಮಾತನಾಡಲು ಅವಕಾಶ ನೀಡಲಾಗಿತ್ತು. ಈಗಾಗಲೇ ಸಾಮಾಜಿಕ ನ್ಯಾಯ ಒದಗಿಸುವಂತೆ ವರಿಷ್ಠರು ಸಲಹೆ ನೀಡಿದ್ದಾರೆ. ಈ ನಿನ್ನೆಲೆಯಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಯಾವ ವರ್ಗದವರಿಂದಲೂ ಸಣ್ಣ ಅಪಸ್ವರ ಬಾರದಂತೆ, ಯಾರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಮತ್ತೊಮ್ಮೆ ಜಾತಿ ಗಣತಿಗೆ ಅವಕಾಶ ಮಾಡಿಕೊಡಲಾಗಿದೆ.
ಆನ್ ಲೈನ್ ಮೂಲಕವೂ ಅವಕಾಶ ಕಲ್ಪಿಸಲು ಒಂದು ದಿನಾಂಕವನ್ನು ನಿರ್ಧರಿಸುತ್ತೇವೆ. ಈ ಬಾರಿ ಮತ್ತೊಂದು ಸುವರ್ಣಾವಕಾಶ ನೀಡುತ್ತಿದ್ದೇವೆ. ಎಲ್ಲರೂ ಅವರ ಜಾತಿಯ ಗುರುತನ್ನು ನ್ಯಾಯಬದ್ಧವಾಗಿ ಸಮೀಕ್ಷಾ ತಂಡಕ್ಕೆ ನೀಡಬೇಕು. ಗಣತಿ ಎನ್ನುವುದು ಸುದೀರ್ಘ ಪ್ರಕ್ರಿಯೆ. ಯಾವಾಗಿನಿಂದ ಗಣತಿ ಆರಂಭವಾಗಲಿದೆ? ಹೇಗೆ ನಡೆಯಲಿದೆ ಎಂಬ ಬಗ್ಗೆ ಶೀಘ್ರವೇ ಮಾಹಿತಿ ಒದಗಿಸುತ್ತೇವೆ ಎಂದಿದ್ದಾರೆ.