ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಹಾಯಕ, ಬಲಪಂಥೀಯ ಕಾರ್ಯಕರ್ತ ಚಾರ್ಲಿ ಕರ್ಕ್ ಅವರು ಬುಧವಾರ ಉತಾಹ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗುಂಡಿನ ದಾಳಿಗೆ ಬಲಿಯಾದ ಬೆನ್ನಲ್ಲೇ ಭಾರತೀಯ ವಲಸಿಗರ ಕುರಿತು ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಯೊಂದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ.
“ಅಮೆರಿಕಕ್ಕೆ ಭಾರತದಿಂದ ಬರುವ ಜನರಿಗೆ ಹೆಚ್ಚಿನ ವೀಸಾಗಳನ್ನು ನೀಡುವ ಅಗತ್ಯವಿಲ್ಲ,” ಎಂಬ ಕರ್ಕ್ ಅವರ ಹೇಳಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಅಮೆರಿಕ ಈಗಾಗಲೇ “ತುಂಬಿಹೋಗಿದೆ” ಮತ್ತು ದೇಶವು ಮೊದಲು ತನ್ನ ಜನರಿಗೆ ಆದ್ಯತೆ ನೀಡುವ ಸಮಯ ಬಂದಿದೆ ಎಂದು ಕರ್ಕ್ ಪ್ರತಿಪಾದಿಸಿದ್ದರು.
“ಅಮೆರಿಕಕ್ಕೆ ಭಾರತದಿಂದ ಬರುವ ಜನರಿಗೆ ಹೆಚ್ಚಿನ ವೀಸಾಗಳ ಅಗತ್ಯವಿಲ್ಲ. ಬಹುಶಃ ಯಾವುದೇ ರೀತಿಯ ಕಾನೂನುಬದ್ಧ ವಲಸೆಯು ಭಾರತದಿಂದ ಬಂದವರಷ್ಟು ಅಮೆರಿಕನ್ ಕಾರ್ಮಿಕರನ್ನು ಸ್ಥಳಾಂತರಿಸಿಲ್ಲ. ಸಾಕು. ನಮ್ಮ ದೇಶ ಈಗಾಗಲೇ ತುಂಬಿ ಹೋಗಿದೆ. ಅಂತಿಮವಾಗಿ ನಮ್ಮ ಜನರಿಗೆ ಮೊದಲ ಆದ್ಯತೆ ನೀಡೋಣ,” ಎಂದು ಅವರು ಸೆಪ್ಟೆಂಬರ್ 2 ರಂದು ಟ್ವೀಟ್ ಮಾಡಿದ್ದರು.
ಫಾಕ್ಸ್ ನ್ಯೂಸ್ ನಿರೂಪಕಿ ಲಾರಾ ಇಂಗ್ರಹಮ್ ಅವರ ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಕರ್ಕ್ ಈ ಪೋಸ್ಟ್ ಮಾಡಿದ್ದರು. ಭಾರತದೊಂದಿಗೆ ಯಾವುದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬೇಕೆಂದರೆ ಅಮೆರಿಕವು ಅವರಿಗೆ ಹೆಚ್ಚಿನ ವೀಸಾಗಳನ್ನು ನೀಡಬೇಕಾಗುತ್ತದೆ ಎಂದು ಲಾರಾ ಅಭಿಪ್ರಾಯಪಟ್ಟಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಕರ್ಕ್, ಭಾರತೀಯರಿಗೆ ಹೆಚ್ಚಿನ ವೀಸಾ ನೀಡಬೇಕಾದ ಅಗತ್ಯವಿಲ್ಲ ಎಂದಿದ್ದರು.
ಸತ್ಯಕ್ಕಾಗಿ ಮಡಿದ ಹುತಾತ್ಮ: ಟ್ರಂಪ್ ಘೋಷಣೆ
ಕರ್ಕ್ ಅವರ ಹತ್ಯೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಟ್ರಂಪ್, ಕರ್ಕ್ ಅವರನ್ನು ಅವರ ಸಂಪ್ರದಾಯವಾದಿ ಮೌಲ್ಯಗಳಿಗಾಗಿ ಹಾಗೂ “ಸತ್ಯಕ್ಕಾಗಿ ಮಡಿದ ಹುತಾತ್ಮ” ಎಂದು ಘೋಷಿಸಿದ್ದಾರೆ. “ಕರ್ಕ್ ಅವರು ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ನ್ಯಾಯ ಮತ್ತು ಅಮೆರಿಕದ ಜನರಿಗಾಗಿ ಹೋರಾಡಿದರು. ಅವರು ಸತ್ಯ ಮತ್ತು ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾಗಿದ್ದಾರೆ,” ಎಂದು ಹೇಳಿದ್ದಾರೆ.
ಅಲ್ಲದೇ, ಕೊಲೆಗಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಟ್ರಂಪ್, “ಈ ದೌರ್ಜನ್ಯಕ್ಕೆ ಮತ್ತು ಇತರ ರಾಜಕೀಯ ಹಿಂಸಾಚಾರಗಳಿಗೆ ಕೊಡುಗೆ ನೀಡಿದ ಪ್ರತಿಯೊಬ್ಬರನ್ನೂ, ಅದಕ್ಕೆ ಹಣಕಾಸು ಮತ್ತು ಬೆಂಬಲ ನೀಡುವ ಸಂಸ್ಥೆಗಳನ್ನೂ ನನ್ನ ಆಡಳಿತವು ಪತ್ತೆ ಹಚ್ಚದೇ ಬಿಡುವುದಿಲ್ಲ,” ಎಂದೂ ಟ್ರಂಪ್ ಶಪಥ ಮಾಡಿದ್ದಾರೆ.



















