ಬೆಂಗಳೂರು: ನಮ್ಮ ಮಾಸಿಕ ಸಂಬಳ, ಬಿಸಿನೆಸ್ ಆದಾಯ ಸೇರಿ ವಿವಿಧ ಆದಾಯದ ಮೂಲಗಳನ್ನು ನಂಬಿಕೊಂಡು ಗೃಹ ಸಾಲ, ವಾಹನ ಸಾಲ ಸೇರಿ ಯಾವುದೇ ಸಾಲವನ್ನು ಮಾಡಿರುತ್ತೇವೆ. ಆದರೆ, ತುರ್ತು ಸಂದರ್ಭಗಳಲ್ಲಿ ನಮಗೆ ಇಎಂಐ ಅನ್ನು ಸಮಯಕ್ಕೆ ಸರಿಯಾಗಿ ಕಟ್ಟಲು ಆಗಿರುವುದಿಲ್ಲ. ಇನ್ನು ಕೆಲ ಸಂದರ್ಭಗಳಲ್ಲಂತೂ ಎರಡು-ಮೂರು ತಿಂಗಳು ಕಟ್ಟಲು ಆಗುವುದಿಲ್ಲ. ಆದರೆ, ಇಂತಹ ಸಂದರ್ಭಗಳಲ್ಲಿ ಇಎಂಐ ಕಟ್ಟದಿದ್ದರೆ ಜೈಲಿಗೆ ಕಳುಹಿಸುತ್ತಾರಾ? ಕ್ರಿಮಿನಲ್ ಕೇಸ್ ಆಗುತ್ತದಾ ಎಂಬ ಆತಂಕ ತುಂಬ ಜನರಿಗೆ ಇರುತ್ತದೆ.
ಆದರೆ, ಇಎಂಐ ಕಟ್ಟದವರು ಈ ಚಿಂತೆ ಮಾಡಬೇಕಿಲ್ಲ. ಹೇಗೆಂದರೆ, ಲೋನ್ ಇಎಂಐ ಕಟ್ಟದಿದ್ದರೆ ಇದು ಕ್ರಿಮಿನಲ್ ಕೇಸ್ ಆಗೋದಿಲ್ಲ. ಚೆಕ್ ಬೌನ್ಸ್ ಆದರೆ ಅದು ಅಪರಾಧ, ಅದಕ್ಕೆ ಜೈಲು ಶಿಕ್ಷೆ ಆಗಬಹುದು. ಆದರೆ, ಸಾಲದ ವಿಚಾರದಲ್ಲಿ ನಿಮ್ಮ ವಿರುದ್ಧ ಕ್ರಿಮಿನಲ್ ಕೇಸ್ ಆಗೋದಿಲ್ಲ. ಹಾಗಂತ, ಆರ್ ಬಿ ಐ ನಿಯಮ ರೂಪಿಸಿದೆ.
ಸಾಲದ ಮರುಪಾವತಿಗಾಗಿಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ನಿಯಮಗಳ ಪ್ರಕಾರ, ಸಾಲದ EMI ಗಳನ್ನು ಪಾವತಿಸದವರಿಗೆ ಯಾರೂ ಕರೆ ಮಾಡಿ ಬೆದರಿಕೆ ಹಾಕುವಂತಿಲ್ಲ. ಇದು ಬಹಳ ಮುಖ್ಯವಾದ ಅಂಶ. ಹಿಂದೆಲ್ಲಾ ಸಾಲ ವಸೂಲಿಗಾರರು ಹಗಲು-ರಾತ್ರಿ ಎನ್ನದೆ ಕಾಲ್ ಮಾಡಿ, ಮನೆಗೆ ಬಂದು ಕಿರುಕುಳ ಕೊಡುತ್ತಿದ್ದರು. ಆದ್ರೆ ಈಗ ಹಾಗಿಲ್ಲ.
ಇದರ ಜತೆಗೆ ಇನ್ನೂ ಕೆಲ ನಿಯಮಗಳನ್ನು ತಿಳಿದುಕೊಳ್ಳಬೇಕು. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ, ನೀವು ಸತತವಾಗಿ ಎರಡು ಅಥವಾ ಮೂರು EMI ಗಳನ್ನು ಕಟ್ಟದಿದ್ರೆ, ಮೊದಲಿಗೆ ನಿಮಗೆ ನೋಟಿಸ್ ಕಳುಹಿಸಬೇಕು. ಅದಕ್ಕಿಂತ ಹೆಚ್ಚಾಗಿ, ಸಾಲ ವಸೂಲಿ ಮಾಡುವವರು ನಿಮ್ಮನ್ನು ಕಿರುಕುಳ ಮಾಡುವಂತಿಲ್ಲ. ಅವರು ನಿಮ್ಮನ್ನು ಗೌರವದಿಂದ ನಡೆಸಿಕೊಳ್ಳಬೇಕು. ನೀವು EMI ಕಟ್ಟಲು ವಿಫಲರಾದರೆ, ನಿಮ್ಮ ಅಡಮಾನವಿಟ್ಟ ಆಸ್ತಿಯನ್ನು ಹರಾಜು ಹಾಕುವ ಮೊದಲು, ಅವರು ನಿಮ್ಮನ್ನು ಸಂಪರ್ಕಿಸಬೇಕು. ನಿಮ್ಮ ಒಪ್ಪಿಗೆ ಪಡೆದ ನಂತರವೇ ಆಸ್ತಿಯನ್ನು ಹರಾಜು ಮಾಡಬೇಕಾಗುತ್ತದೆ.