ಬೆಂಗಳೂರು: ಮನೆ, ವಾಹನ, ಶಿಕ್ಷಣ ಸೇರಿ ಹಲವು ಕಾರಣಗಳಿಗಾಗಿ ಬ್ಯಾಂಕುಗಳಿಂದ ಪರ್ಸನಲ್ ಲೋನ್ ತೆಗೆದುಕೊಳ್ಳುತ್ತೇವೆ. ಈಗಂತೂ ಆ್ಯಪ್ ಗಳಲ್ಲಿಯೇ ಲಕ್ಷಾಂತರ ರೂಪಾಯಿ ಸಾಲ ನೀಡಲಾಗುತ್ತದೆ. ಆದರೆ, ಹೀಗೆ ಸಾಲ ತೆಗೆದುಕೊಳ್ಳುವ ಮುನ್ನ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ವಿಧಿಸುವ ರಹಸ್ಯ ಶುಲ್ಕಗಳ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲವಾದರೆ, ಸಾಲ ಪಡೆದುಕೊಂಡ ಬಳಿಕ ಬೇರೆ ವಿಧಿ ಇಲ್ಲದೆ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.
ಪ್ರೊಸೆಸಿಂಗ್ ಫೀ
ಪರ್ಸನಲ್ ಲೋನ್ ಸೇರಿ ಯಾವುದೇ ರೀತಿಯ ಸಾಲ ಪಡೆಯುವಾಗ ಪ್ರೊಸೆಸಿಂಗ್ ಫೀ ಕಟ್ಟುವುದು ಕಡ್ಡಾಯವಾಗಿದೆ. ಸಾಮಾನ್ಯವಾಗಿ ಸಾಲದ ಶೇ. 2ರಿಂದ 6ರವರೆಗಿನ ಮೊತ್ತವನ್ನು ಶುಲ್ಕವಾಗಿ ಪಡೆಯಲಾಗುತ್ತದೆ. ಶೇ. 5ರಷ್ಟು ಪ್ರೊಸೆಸಿಂಗ್ ಫೀ ಇದ್ದಲ್ಲಿ ನೀವು ಒಂದು ಲಕ್ಷ ರೂ ಸಾಲ ಪಡೆದಾಗ 5,000 ರೂ ಅನ್ನು ಶುಲ್ಕವಾಗಿ ಮುರಿದುಕೊಳ್ಳಲಾಗುತ್ತದೆ. ಇದರ ಜತೆಗೆ ಸ್ಟ್ಯಾಂಪ್ ಡ್ಯೂಟಿ ಬೇರೆ ಬೇರೆ ವೆಚ್ಚಗಳನ್ನೂ ನಿಮ್ಮಿಂದಲೇ ಭರಿಸಲಾಗುತ್ತದೆ. ಇವುಗಳ ಬಗ್ಗೆ ಗಮನ ಹರಿಸಬೇಕು. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಪ್ರೊಸೆಸಿಂಗ್ ಫೀ ವಿನಾಯಿತಿ ನೀಡುವಂತೆ ಬ್ಯಾಂಕ್ ಗೆ ಮನವಿ ಮಾಡಬಹುದು.
ವೈಯಕ್ತಿಕ ಸಾಲಕ್ಕೆ ಅರ್ಜಿ ಹಾಕಿದಾಗ ಬ್ಯಾಂಕ್ ನವರು ನಿಮ್ಮ ಕ್ರೆಡಿಟ್ ರೇಟಿಂಗ್ ಪರಿಶೀಲಿಸಲು ಏಜೆನ್ಸಿಗಳ ನೆರವು ಪಡೆಯುತ್ತವೆ. ಇದಕ್ಕೆ ಬ್ಯಾಂಕ್ ಗೆ ಹೆಚ್ಚಿನ ಹಣ ಖರ್ಚಾಗುತ್ತದೆ. ಇದರ ಹೊರೆಯನ್ನು ಬ್ಯಾಂಕುಗಳು ಗ್ರಾಹಕರ ಮೇಲೇ ಹಾಕುತ್ತವೆ. ವೆರಿಫಿಕೇಶನ್ ಚಾರ್ಜಸ್ ಎಂದು ಕರೆದು, ಗ್ರಾಹಕರಿಂದಲೇ ಪಾವತಿ ಮಾಡಿಸಿಕೊಳ್ಳುತ್ತವೆ.
ಹೆಚ್ಚುವರಿ ಶುಲ್ಕಗಳ ಪಟ್ಟಿ ಇಲ್ಲಿಗೇ ಮುಗಿಯುವುದಿಲ್ಲ. ಸಾಲದ ಕಂತುಗಳನ್ನು ಚೆಕ್ ರೂಪದಲ್ಲಿ ಕಟ್ಟುತ್ತಿದ್ದರೆ, ನಿಮ್ಮ ಮನೆಯಿಂದ ಚೆಕ್ ಪಿಕಪ್ ಮಾಡಿಕೊಳ್ಳುವ ಅವಕಾಶವನ್ನು ಬ್ಯಾಂಕ್ ನೀಡಬಹುದು. ಆದರೆ, ಇದಕ್ಕೆ ಕಲೆಕ್ಷನ್ ಅಥವಾ ಇಎಂಐ ಪಿಕಪ್ ಶುಲ್ಕ ವಿಧಿಸಲಾಗುತ್ತದೆ. ಚೆಕ್ ಮೂಲಕ ಇಎಂಐ ಪಾವತಿಸುತ್ತಿದ್ದು, ಆ ಚೆಕ್ ಸರಿಯಾಗಿ ಕ್ರೆಡಿಟ್ ಆಗದೇ ಹೋದರೆ ಅಥವಾ ಬೌನ್ಸ್ ಆದರೆ ಆಗ ಬ್ಯಾಂಕ್ ನವರು ಪೇಮೆಂಟ್ ರಿಟರ್ನ್ ಚಾರ್ಜ್ ವಿಧಿಸಬಹುದು.
ಸಾಲದ ಮೇಲಿನ ಇಎಂಐ ಕಟ್ಟಲು ಒಂದು ದಿನಾಂಕವನ್ನು ಗಡುವಾಗಿ ನಿಗದಿ ಮಾಡಲಾಗುತ್ತದೆ. ಈ ದಿನದೊಳಗೆ ಪಾವತಿಸದಿದ್ದರೆ ಪೇಮೆಂಟ್ ಡಿಲೇ ಎಂದು ಪರಿಗಣಿಸಿ ದಂಡ ವಿಧಿಸಲಾಗುತ್ತದೆ. ಇಎಂಐ ಪಾವತಿಸುವ ವಿಧ ಬದಲಾಯಿಸಿದರೆ ಅದಕ್ಕೆ ಶುಲ್ಕ ಇರುತ್ತದೆ. ಸಾಲವನ್ನು ಬೇಗ ಮುಗಿಸಲು ರೆಗ್ಯುಲರ್ ಇಎಂಐಗಿಂತ ಒಂದಷ್ಟು ಹೆಚ್ಚುವರಿ ಹಣವನ್ನು ನೀವು ಪಾವತಿಸಿದರೆ ಅದಕ್ಕೆ ಪಾರ್ಶಿಯಲ್ ರೀಪೇಮೆಂಟ್ ಎಂದು ಪ್ರತ್ಯೇಕ ಶುಲ್ಕ ಹಾಕಲಾಗುತ್ತದೆ.