ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ನಲ್ಲಿ (Congress) ಆಂತರಿಕ ಸಂಘರ್ಷ ಜೋರಾಗಿದೆ. ಕೆಪಿಸಿಸಿ ಅಧ್ಯಕ್ಷರ (KPCC President) ಬದಲಾವಣೆಯ ಕೂಗು ಈಗ ದೊಡ್ಡ ವಿವಾದಕ್ಕೆ ಕಾರಣವಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಗಾದಿಯ ಆಕಾಂಕ್ಷಿಗಳಿಗೆ ಈಗ ಡಿಕೆ ಶಿವಕುಮಾರ್ (DK Shivakumar) ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಾವು ಕಸ ಹೊಡೆದು, ಕೊಳೆಯೆಲ್ಲಾ ತೆಗೆಯುತ್ತೇವೆ ಎಂದು ಹೇಳುವ ಮೂಲಕ ಸತೀಶ್ ಜಾರಕಿಹೊಳಿ ಹಾಗೂ ಅವರ ಬೆಂಬಲಿಗರಿಗೆ ಟಾಂಗ್ ನೀಡಿದ್ದಾರೆ.
ನಾನು ಸೇರಿದಂತೆ ಎಲ್ಲರೂ ಬಾಯಿಗೆ ಬೀಗ ಹಾಕಬೇಕೆಂದು ದೆಹಲಿ ನಾಯಕರು ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಅಧ್ಯಕ್ಷರು. ಅವರ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ನಾವೆಲ್ಲ ಗಾಂಧಿ ವಂಶಸ್ಥರು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷರ ವಿಚಾರ ಸೇರಿದಂತೆ ಆಂತರಿಕ ಸಂಘರ್ಷಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಕಿಡಿಕಾರಿದ್ದಾರೆ. ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಮೊದಲು ನಿಮಗೆ ಕೊಟ್ಟ ಕೆಲಸ ಮಾಡಿ. ಯಾವಾಗ ಏನು ಮಾಡಬೇಕು ಎಂಬುದು ಹೈಕಮಾಂಡ್ ಗೆ ಗೊತ್ತಿದೆ. ಅದನ್ನು ಬಿಟ್ಟು ಏನೇನೋ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.