ನವದೆಹಲಿ: ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ನಂತರ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದ ಘಟನೆಯ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ. ಕ್ರೀಡಾ ಸ್ಫೂರ್ತಿಯನ್ನು ರಾಜಕೀಯ ಮತ್ತು ಮಿಲಿಟರಿ ಸಂಘರ್ಷಗಳಿಂದ ಪ್ರತ್ಯೇಕವಾಗಿಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ನಮ್ಮ ಭಾವನೆಗಳು ಪಾಕಿಸ್ತಾನದ ಬಗ್ಗೆ ಅಷ್ಟೊಂದು ತೀವ್ರವಾಗಿದ್ದರೆ, ನಾವು ಅವರೊಂದಿಗೆ ಆಡಲೇಬಾರದಿತ್ತು” ಎಂದು ತರೂರ್ ಹೇಳಿದ್ದಾರೆ. “ಆದರೆ, ಒಮ್ಮೆ ಆಡಲು ನಿರ್ಧರಿಸಿದ ಮೇಲೆ, ನಾವು ಅದನ್ನು ಕ್ರೀಡಾ ಸ್ಫೂರ್ತಿಯಿಂದ ಆಡಬೇಕಿತ್ತು ಮತ್ತು ಅವರೊಂದಿಗೆ ಹಸ್ತಲಾಘವ ಮಾಡಬೇಕಿತ್ತು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಐತಿಹಾಸಿಕ ಘಟನೆಯ ಉಲ್ಲೇಖ
ಈ ಹಿಂದೆ 1999ರಲ್ಲಿ ಕಾರ್ಗಿಲ್ ಯುದ್ಧ ನಡೆಯುತ್ತಿದ್ದಾಗಲೂ, ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು ಎಂದು ತರೂರ್ ನೆನಪಿಸಿಕೊಂಡರು. “ಆಗ ನಮ್ಮ ಸೈನಿಕರು ದೇಶಕ್ಕಾಗಿ ಪ್ರಾಣ ತೆತ್ತ ದಿನದಂದೇ ನಾವು ಪಾಕಿಸ್ತಾನದ ವಿರುದ್ಧ ಆಡುತ್ತಿದ್ದೆವು. ಆಗಲೂ ನಾವು ಹಸ್ತಲಾಘವ ಮಾಡಿದ್ದೆವು. ಏಕೆಂದರೆ ಕ್ರೀಡಾ ಸ್ಫೂರ್ತಿಯೆನ್ನುವುದು ದೇಶಗಳ ನಡುವಿನ ಮತ್ತು ಸೈನ್ಯಗಳ ನಡುವಿನ ಸಂಬಂಧಕ್ಕಿಂತ ಭಿನ್ನವಾದುದು. ಇದು ನನ್ನ ದೃಷ್ಟಿಕೋನ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಘಟನೆಯ ಹಿನ್ನೆಲೆ”
ಏಷ್ಯಾ ಕಪ್ ಪಂದ್ಯ ಮುಗಿದ ನಂತರ, ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ, ಪಾಕಿಸ್ತಾನ ತಂಡದೊಂದಿಗೆ ಹಸ್ತಲಾಘವ ಮಾಡದೆ ಮೈದಾನದಿಂದ ಹೊರನಡೆದಿದ್ದು, ನಂತರ, ಸೂರ್ಯಕುಮಾರ್ ಯಾದವ್ ಅವರು ಈ ಗೆಲುವನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಸಮರ್ಪಿಸುವುದಾಗಿ ಹೇಳಿ, ಪಹಲ್ಗಾಮ್ ಸಂತ್ರಸ್ತರೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿದ್ದರು.
ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನಂತರ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಭಾರತೀಯ ಸಶಸ್ತ್ರ ಪಡೆಗಳು ‘ಆಪರೇಷನ್ ಸಿಂದೂರ’ ಆರಂಭಿಸಿದ ನಂತರ, ಉಭಯ ರಾಷ್ಟ್ರಗಳ ನಡುವೆ ನಡೆದ ಮೊದಲ ಪಂದ್ಯ ಇದಾಗಿತ್ತು.
ಎರಡೂ ಕಡೆಯ ಪ್ರತಿಕ್ರಿಯೆಗಳು ಕ್ರೀಡಾಸ್ಫೂರ್ತಿಯ ಕೊರತೆಯನ್ನು ತೋರಿಸುತ್ತವೆ ಎಂದು ತರೂರ್ ಹೇಳಿದ್ದಾರೆ. “ಮೊದಲ ಬಾರಿಗೆ ಅವಮಾನಕ್ಕೊಳಗಾದ ಪಾಕಿಸ್ತಾನಿ ತಂಡವು, ಎರಡನೇ ಬಾರಿಗೆ ನಮಗೆ ಅವಮಾನ ಮಾಡಲು ನಿರ್ಧರಿಸಿದ್ದರೆ, ಅದು ಎರಡೂ ಕಡೆಗಳಲ್ಲಿ ಕ್ರೀಡಾ ಸ್ಫೂರ್ತಿ ಇಲ್ಲದಿರುವುದನ್ನು ತೋರಿಸುತ್ತದೆ” ಎಂದು ಅವರು ತಿಳಿಸಿದ್ದಾರೆ.



















