ಉಡುಪಿ: ಸಮಾಜವನ್ನು ಹೊಲಿಯುವವರು ಬೇಕು, ತುಂಡರಿಸುವವರು ಬೇಡ. ಸಮಾಜವನ್ನು ಒಗ್ಗೂಡಿಸುವ ಕೆಲಸವಾಗಬೇಕು ಎಂದು ಉಡಪಿ ಶ್ರೀ ಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಜಿಲ್ಲಾ ಸಮಿತ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಂಡಿದ್ದ ರಜತ ಸಂಭ್ರಮ ಹಾಗೂ ಟೈಲರ್ಸ್ ವೃತ್ತಿ ಬಾಂಧವರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಶ್ರೀಗಳು ಮಾತನಾಡಿದರು.
ಸಂಘಟನೆಯಿಂದ ಟೈಲರ್ ವೃತ್ತಿಯ ರಕ್ಷಣೆ ಮತ್ತು ಪ್ರಗತಿ ಸಾಧ್ಯವಿದೆ. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕೆಂದು ಸಲಹೆ ನೀಡಿದ್ದಾರೆ.
ಮಾಜಿ ಸಚಿವ, ಸಂಸದ ಕೆ ಜಯಪ್ರಕಾಶ್ ಹೆಗ್ಡೆ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಟೈಲರ್ ಬಾಂಧವರ ಬೇಡಿಕೆಗಳಿಗೆ ಸಂಬಂಧಿಸಿ ವಿಧಾನಸಭೆಯಲ್ಲಿ ಮಾತನಾಡಿದ ಮಾತ್ರಕ್ಕೆ ನಿಮ್ಮ ಸಮಸ್ಯೆ ಬಗೆಹರಿಯದು. ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಚರ್ಚಿಸಬೇಕು. ನಿಮ್ಮ ಬೇಡಿಕೆಗಳ ಕುರಿತು ಸಚಿವರಲ್ಲಿ ಚರ್ಚಿಸಲು ನಾನೂ ಬರುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಪ್ರಧಾನ ಕಾರ್ಯದರ್ಶಿ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ ಮಾತನಾಡಿ, ಸರ್ಕಾರ ನಮ್ಮ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಟೈಲರ್ ವೃತ್ತಿಯವರಿಗೂ ಜೀವನ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಟೈಲರ್ ವೃತ್ತಿ ಬಾಂಧವರಿಗೆ ಭವಿಷ್ಯ ನಿಧಿ ಜಾರಿಗೊಳಿಸಬೇಕು, ನೆರೆ ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿರುವಂತೆ ನಾವು ಕೂಡ ಮಾಸಿಕ ₹100 ಪಾವತಿ ಮಾಡಲು ಸಿದ್ಧರಿದ್ದೇವೆ ಅದನ್ನು ಟೈಲರ್ ಕಾರ್ಮಿಕ ಕಲ್ಯಾಣ ನಿಧಿಗೆ ಬಳಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಜವಳಿ ಉದ್ಯಮದ ಅಭಿವೃದ್ಧಿಯಲ್ಲಿ ಟೈಲರ್‌ಗಳ ಪಾತ್ರ ಮಹತ್ವದ್ದಾಗಿದೆ. ಸರ್ಕಾರ ಜವಳಿ ಉತ್ಪನ್ನಗಳಾದ ಬಟ್ಟೆಗಳು, ಸಿದ್ಧ ಉಡುಪುಗಳು, ಹೊಲಿಗೆ ಯಂತ್ರ, ದಾರ ಮೊದಲಾದವುಗಳ ಮೇಲೆ ಸೆಸ್ ವಿಧಿಸಿ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ರೀತಿಯಲ್ಲಿ ನಮ್ಮ ಸಂಘಟನೆಗೂ ಸವಲತ್ತುಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.