ಲಾಹೋರ್/ನವದೆಹಲಿ: ಭಯೋತ್ಪಾದನೆಯನ್ನು ಪೋಷಿಸುತ್ತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗುತ್ತಿರುವ ಪಾಕಿಸ್ತಾನಕ್ಕೆ, ಈಗ ಕ್ರೀಡಾ ಮೈದಾನದಲ್ಲೂ ಭಾರತ ನೀಡುತ್ತಿರುವ ತಕ್ಕ ಪ್ರತ್ಯುತ್ತರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ತಂಡಗಳು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡದಿರುವ ಗೌರವಯುತ ಹಾಗೂ ಕಠಿಣ ನಿಲುವನ್ನು ತಳೆದಿವೆ. ಆದರೆ, ಭಾರತದ ಈ ನೈತಿಕ ನಡೆಯನ್ನು ಹಗುರವಾಗಿ ಪರಿಗಣಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ, ಉಡಾಫೆಯ ಹೇಳಿಕೆ ನೀಡುವ ಮೂಲಕ ತಮ್ಮ ಅಹಂಕಾರವನ್ನು ಪ್ರದರ್ಶಿಸಿದ್ದಾರೆ.
ಭಾರತದ ಮೌನ ಪ್ರತಿಭಟನೆಗೆ ನಖ್ವಿ ತತ್ತರ
ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಏಷ್ಯಾ ಕಪ್‌ನಿಂದ ಆರಂಭಗೊಂಡು ಇತ್ತೀಚಿನ ಅಂಡರ್-19 ಏಷ್ಯಾ ಕಪ್‌ವರೆಗೆ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಪಂದ್ಯ ಮುಗಿದ ನಂತರ ಪಾಕಿಸ್ತಾನಿ ಆಟಗಾರರ ಕೈಕುಲುಕುವುದನ್ನು ನಿಲ್ಲಿಸಿವೆ. ಇದು ಕೇವಲ ಕ್ರೀಡಾ ನಿರ್ಧಾರವಲ್ಲ, ಬದಲಿಗೆ ಅಮಾಯಕ ಭಾರತೀಯರ ರಕ್ತ ಹರಿಸುತ್ತಿರುವ ದೇಶದ ವಿರುದ್ಧದ ಒಂದು ಸಬಲ ರಾಜತಾಂತ್ರಿಕ ಪ್ರತಿಭಟನೆಯಾಗಿದೆ. ಭಾರತದ ಈ ಗಟ್ಟಿ ನಿರ್ಧಾರವು ಪಾಕಿಸ್ತಾನವನ್ನು ಜಾಗತಿಕ ಕ್ರೀಡಾ ವೇದಿಕೆಯಲ್ಲಿ ಮುಜುಗರಕ್ಕೀಡು ಮಾಡುತ್ತಿದೆ. ಇದನ್ನು ಕಂಡು ವಿಚಲಿತರಾಗಿರುವ ಮೊಹ್ಸಿನ್ ನಖ್ವಿ, ಭಾರತದ ನಿಲುವನ್ನು ಗೌರವಿಸುವ ಬದಲು, “ಅವರಿಗೆ ಇಷ್ಟವಿಲ್ಲದಿದ್ದರೆ ನಮಗೂ ಹಸ್ತಲಾಘವ ಮಾಡುವ ಆಸೆಯಿಲ್ಲ” ಎನ್ನುವ ಮೂಲಕ ತಮ್ಮ ಸಂಸ್ಕಾರವನ್ನೇ ಪ್ರಶ್ನೆ ಮಾಡುವಂತೆ ವರ್ತಿಸಿದ್ದಾರೆ.
ಉದ್ಧಟತನ ಮೆರೆದ ಪಿಸಿಬಿ ಮುಖ್ಯಸ್ಥ
ಲಾಹೋರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಖ್ವಿ, ತಮ್ಮ ಉಡಾಫೆಯ ಮನೋಭಾವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ಅವರು, ಕ್ರೀಡೆ ಮತ್ತು ರಾಜಕೀಯವನ್ನು ಬೆರೆಯಬಾರದು ಎಂಬ ಹಳೆಯ ರಾಗವನ್ನೇ ಮಗದೊಮ್ಮೆ ಹಾಡಿದ್ದಾರೆ. “ನಮಗೆ ಯಾರನ್ನೂ ಬಲವಂತ ಮಾಡುವ ಉದ್ದೇಶವಿಲ್ಲ. ಭಾರತದವರು ಒಂದು ಹೆಜ್ಜೆ ಹಿಂದೆ ಸರಿದರೆ ನಾವೂ ಅದೇ ರೀತಿ ಮಾಡುತ್ತೇವೆ. ನಾವು ಭಾರತದೊಂದಿಗೆ ಸಮಾನ ನೆಲೆಯಲ್ಲೇ ವ್ಯವಹರಿಸುತ್ತೇವೆ” ಎಂದು ದರ್ಪದಿಂದ ಹೇಳಿದ್ದಾರೆ. ಆದರೆ, ಗಡಿಯಲ್ಲಿ ಉಗ್ರರನ್ನು ನುಗ್ಗಿಸಿ ಭಾರತದ ಶಾಂತಿಯನ್ನು ಕದಡುತ್ತಿರುವ ಪಾಕಿಸ್ತಾನಕ್ಕೆ, ಮೈದಾನದಲ್ಲಿ ಭಾರತ ತೋರುತ್ತಿರುವ ಈ ತಿರಸ್ಕಾರವು ದೊಡ್ಡ ಮಟ್ಟದ ಹಿನ್ನಡೆಯಾಗಿ ಪರಿಣಮಿಸಿದೆ ಎಂಬುದು ನಖ್ವಿಯವರ ಈ ಹತಾಶೆಯ ಮಾತುಗಳಿಂದ ಸ್ಪಷ್ಟವಾಗುತ್ತಿದೆ.
ಭಯೋತ್ಪಾದನೆ ಮತ್ತು ಕ್ರೀಡೆ ಒಟ್ಟಿಗೆ ಸಾಗದು
ಭಾರತದ ಈ ಕಠಿಣ ನಿಲುವಿನ ಹಿಂದೆ ಪಹಲ್ಗಾಮ್‌ನ ರಕ್ತಸಿಕ್ತ ಇತಿಹಾಸವಿದೆ. ಪಾಕ್ ಪ್ರೇರಿತ ಉಗ್ರರು 26 ಅಮಾಯಕ ಭಾರತೀಯ ಪ್ರವಾಸಿಗರನ್ನು ಬಲಿಪಡೆದ ನೋವು ಇಡೀ ದೇಶವನ್ನು ಕಾಡುತ್ತಿದೆ. ಈ ಘಟನೆಗೆ ಪ್ರತಿಯಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂದೂರ್’ ಮೂಲಕ ಉಗ್ರರ ಅಡಗುದಾಣಗಳನ್ನು ಧ್ವಂಸ ಮಾಡುತ್ತಿದ್ದರೆ, ಕ್ರಿಕೆಟ್ ಮೈದಾನದಲ್ಲಿ ಭಾರತೀಯ ಆಟಗಾರರು ತಮ್ಮ ಶಿಸ್ತಿನ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ. ರಾಷ್ಟ್ರದ ಗೌರವಕ್ಕೆ ಧಕ್ಕೆಯಾದಾಗ ಕ್ರೀಡಾ ಸೌಜನ್ಯಕ್ಕೆ ಜಾಗವಿಲ್ಲ ಎಂಬ ಬಿಸಿಸಿಐ ಸಂದೇಶವನ್ನು ನಖ್ವಿ ಉಡಾಫೆಯಾಗಿ ಕಂಡಿರಬಹುದು, ಆದರೆ ಇದು ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ತಲುಪಿರುವ ದೊಡ್ಡ ಹೊಡೆತವಾಗಿದೆ.
ಇದನ್ನೂ ಓದಿ; ಲಂಕಾ ವನಿತೆಯರ ವಿರುದ್ಧ ಭಾರತಕ್ಕೆ ಭರ್ಜರಿ ಜಯ ; ಸ್ಮೃತಿ-ಶಫಾಲಿ ಐತಿಹಾಸಿಕ ಜತೆಯಾಟದ ದಾಖಲೆ!



















