ವಾಷಿಂಗ್ಟನ್: ಭಾರತವು ರಷ್ಯಾ ಮತ್ತು ಚೀನಾ ಜತೆ ಕೈಜೋಡಿಸಿರುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸಹಿಸಲಾಗುತ್ತಿಲ್ಲ. ಅದರ ಪರಿಣಾಮವೆಂಬಂತೆ, ಡೊನಾಲ್ಡ್ ಟ್ರಂಪ್ ಅವರು ಭಾರತದ ವ್ಯಾಪಾರ ನೀತಿಗಳ ವಿರುದ್ಧ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸುಂಕಗಳನ್ನು ವಿಧಿಸುತ್ತಿದೆ ಮತ್ತು ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧವು “ಏಕಪಕ್ಷೀಯವಾಗಿದೆ” ಎಂದು ಆರೋಪಿಸಿದ್ದಾರೆ.
ಮಂಗಳವಾರ ಶ್ವೇತಭವನದ ಓವಲ್ ಕಚೇರಿಯಲ್ಲಿ ಮಾತನಾಡಿದ ಟ್ರಂಪ್, “ನಾವು ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ, ಆದರೆ ಹಲವು ವರ್ಷಗಳಿಂದ ಇದು ಏಕಪಕ್ಷೀಯ ಸಂಬಂಧವಾಗಿತ್ತು. ನಾವು ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿ ಬದಲಾಗಿದೆ. ಭಾರತ ನಮ್ಮ ಮೇಲೆ ಅತಿಯಾದ ಸುಂಕಗಳನ್ನು ವಿಧಿಸುತ್ತಿತ್ತು, ಆದರೆ ನಾವು ಅವರ ಮೇಲೆ ಯಾವುದೇ ಸುಂಕ ವಿಧಿಸುತ್ತಿರಲಿಲ್ಲ,” ಎಂದು ಹೇಳಿದರು.
“ಭಾರತವು ತಾನು ತಯಾರಿಸಿದ ಎಲ್ಲವನ್ನೂ ನಮ್ಮ ದೇಶಕ್ಕೆ ಕಳುಹಿಸುತ್ತಿತ್ತು, ಆದರೆ ನಾವು ಅವರಿಗೆ ಏನನ್ನೂ ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ, ಏಕೆಂದರೆ ಅವರು ನಮ್ಮ ಮೇಲೆ ಶೇ.100ರಷ್ಟು ಸುಂಕ ವಿಧಿಸುತ್ತಿದ್ದರು,” ಎಂದು ಟ್ರಂಪ್ ಆರೋಪಿಸಿದ್ದಾರೆ.
ಅಮೆರಿಕದ ಪ್ರಸಿದ್ಧ ಮೋಟಾರ್‌ಸೈಕಲ್ ಬ್ರ್ಯಾಂಡ್ ಹಾರ್ಲೆ-ಡೇವಿಡ್ಸನ್ ಅನ್ನು ಇದಕ್ಕೆ ಉದಾಹರಣೆಯಾಗಿ ನೀಡಿದ ಅವರು, “ಭಾರತದಲ್ಲಿ ನಮ್ಮ ಬೈಕ್‌ಗಳ ಮೇಲೆ ಶೇ.200 ಸುಂಕವಿತ್ತು. ಇದರಿಂದಾಗಿ ಹಾರ್ಲೆ-ಡೇವಿಡ್ಸನ್ ಭಾರತದಲ್ಲಿಯೇ ಒಂದು ಉತ್ಪಾದನಾ ಘಟಕವನ್ನು ಸ್ಥಾಪಿಸಬೇಕಾಯಿತು. ಆಗ ಅವರಿಗೆ ಸುಂಕ ಪಾವತಿಸಬೇಕಾಗಿಲ್ಲ,” ಎಂದು ವಿವರಿಸಿದರು.
“ಭಾರತ ಈಗ ತನ್ನ ಸುಂಕಗಳನ್ನು ಶೂನ್ಯಕ್ಕೆ ಇಳಿಸಲು ಪ್ರಸ್ತಾಪಿಸಿದೆ, ಆದರೆ ಈಗ ತುಂಬಾ ತಡವಾಗಿದೆ,” ಎಂದು ಟ್ರಂಪ್ ಸೋಮವಾರ ಹೇಳಿದ್ದರು. ತಮ್ಮ ಕಠಿಣ ವ್ಯಾಪಾರ ನೀತಿಗಳಿಂದಾಗಿ, ಚೀನಾ, ಮೆಕ್ಸಿಕೋ ಮತ್ತು ಕೆನಡಾದಿಂದ ಸಾವಿರಾರು ಕಂಪನಿಗಳು ಅಮೆರಿಕಕ್ಕೆ ಮರಳಿ ಬರುತ್ತಿವೆ. ಇಲ್ಲಿ ಉತ್ಪಾದನೆ ಮಾಡಿದರೆ ಅವರು ಯಾವುದೇ ಸುಂಕ ಪಾವತಿಸಬೇಕಾಗಿಲ್ಲ,” ಎಂದು ಟ್ರಂಪ್ ವಾದಿಸಿದರು.