ಕೊಲಂಬೊ : ಟಿ20 ವಿಶ್ವಕಪ್ 2026ರ ಹೈವೋಲ್ಟೇಜ್ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಆದರೆ, ಪಂದ್ಯ ಆರಂಭಕ್ಕೂ ಮುನ್ನವೇ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಆಘಾ ಅವರು ನೀಡಿರುವ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಭಾರತದ ವಿರುದ್ಧ ತಮ್ಮ ತಂಡ ಹೊಂದಿರುವ ಕಳಪೆ ದಾಖಲೆಯನ್ನು ಒಪ್ಪಿಕೊಂಡಿರುವ ಅವರು, ಪರೋಕ್ಷವಾಗಿ ಭಾರತವೇ ಗೆಲುವಿನ ಫೇವರಿಟ್ ಎಂದು ಬಿಂಬಿಸಿದ್ದಾರೆ.
ಶನಿವಾರ ನಡೆದ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಲ್ಮಾನ್ ಅಲಿ ಆಘಾ, “ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ನಮ್ಮ ದಾಖಲೆ ಅಷ್ಟೇನೂ ಉತ್ತಮವಾಗಿಲ್ಲ ಎಂಬುದು ನಮಗೆ ತಿಳಿದಿದೆ. ನಾವು ಗತಕಾಲದ ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಪ್ರತಿ ದಿನವೂ ಹೊಸ ದಿನವಾಗಿರುತ್ತದೆ,” ಎಂದು ಮಾರ್ಮಿಕವಾಗಿ ನುಡಿದರು.
ಅಭಿಷೇಕ್ ಶರ್ಮಾ ಬಗ್ಗೆ ಮೆಚ್ಚುಗೆ
ಭಾರತದ ಯುವ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅನಾರೋಗ್ಯದ ಕಾರಣ ತಂಡದಿಂದ ಹೊರಗುಳಿದಿರುವ ಬಗ್ಗೆಯೂ ಪಾಕ್ ನಾಯಕ ಪ್ರತಿಕ್ರಿಯಿಸಿದ್ದಾರೆ. “ಅಭಿಷೇಕ್ ಶರ್ಮಾ ಒಬ್ಬ ಅದ್ಭುತ ಆಟಗಾರ. ನಾವು ಯಾವಾಗಲೂ ಅತ್ಯುತ್ತಮ ತಂಡದ ವಿರುದ್ಧ ಸ್ಪರ್ಧಿಸಲು ಬಯಸುತ್ತೇವೆ. ಅವರು ಆದಷ್ಟು ಬೇಗ ಚೇತರಿಸಿಕೊಂಡು ಮೈದಾನಕ್ಕೆ ಮರಳಲಿ ಎಂದು ಹಾರೈಸುತ್ತೇವೆ,” ಎಂದು ಕ್ರೀಡಾ ಸ್ಫೂರ್ತಿ ಮೆರೆದರು.
ಉಸ್ಮಾನ್ ತಾರಿಕ್ ಬೌಲಿಂಗ್ ವಿವಾದಕ್ಕೆ ತೆರೆ
ಪಾಕಿಸ್ತಾನದ ಮಿಸ್ಟರಿ ಸ್ಪಿನ್ನರ್ ಉಸ್ಮಾನ್ ತಾರಿಕ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಎದ್ದಿರುವ ವಿವಾದಗಳ ಕುರಿತು ನಾಯಕ ಸಲ್ಮಾನ್ ಆಘಾ ಸ್ಪಷ್ಟನೆ ನೀಡಿದ್ದಾರೆ. “ಐಸಿಸಿ ಈಗಾಗಲೇ ಎರಡು ಬಾರಿ ಅವರ ಬೌಲಿಂಗ್ ಆಕ್ಷನ್ ಪರೀಕ್ಷಿಸಿ ಕ್ಲಿಯರೆನ್ಸ್ ನೀಡಿದೆ. ಹೀಗಿರುವಾಗ ಅನಗತ್ಯ ಗದ್ದಲ ಏಕೆ ಎನ್ನುವುದು ಅರ್ಥವಾಗುತ್ತಿಲ್ಲ. ಉಸ್ಮಾನ್ ಕೂಡ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ,” ಎಂದು ಸಮರ್ಥಿಸಿಕೊಂಡರು.
ತಮ್ಮ ತಂಡದ ಬೌಲಿಂಗ್ ಬಲದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, “ನಮ್ಮ ತಂಡದಲ್ಲಿ ಪಂದ್ಯದ ಗತಿ ಬದಲಿಸಬಲ್ಲ ಸ್ಪಿನ್ನರ್‌ಗಳು ಮತ್ತು ವೇಗಿಗಳಿದ್ದಾರೆ. 15 ಆಟಗಾರರ ಬಳಗದಲ್ಲಿ ಯಾರನ್ನೇ ಆಡಿಸಿದರೂ ಗೆಲ್ಲುವ ವಿಶ್ವಾಸ ನನಗಿದೆ,” ಎಂದು ಎದುರಾಳಿಗಳಿಗೆ ಎಚ್ಚರಿಕೆ ನೀಡಿದರು.
ಇತಿಹಾಸದ ಪುಟಗಳಲ್ಲಿ ಭಾರತವೇ ಕಿಂಗ್!
ಟಿ20 ವಿಶ್ವಕಪ್ ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ ಭಾರತದ ಪ್ರಾಬಲ್ಯ ಎದ್ದು ಕಾಣುತ್ತದೆ. ಉಭಯ ತಂಡಗಳು ವಿಶ್ವಕಪ್ ವೇದಿಕೆಯಲ್ಲಿ ಇದುವರೆಗೂ 8 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಟೀಮ್ ಇಂಡಿಯಾ ಬರೋಬ್ಬರಿ 7 ಬಾರಿ ಜಯಭೇರಿ ಬಾರಿಸಿದೆ. ಪಾಕಿಸ್ತಾನಕ್ಕೆ ಒಲಿದಿರುವುದು ಕೇವಲ ಒಂದು ಗೆಲುವು ಮಾತ್ರ (2021ರಲ್ಲಿ). 9ನೇ ಮುಖಾಮುಖಿಯಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಭಾನುವಾರ ನಿರ್ಧಾರವಾಗಲಿದೆ.
ಇದನ್ನೂ ಓದಿ : ತಾಯಿಯ ಫೋಟೋ ಶೂಟ್ ವೇಳೆ ದುರಂತ.. ಮೂರು ವರ್ಷದ ಕಂದಮ್ಮ ಸಾ*ವು



















