ಬೆಂಗಳೂರು: ಆಯುಷ್ ಇಲಾಖೆಯ ರಾಷ್ಟ್ರೀಯ ಆಯುಷ್ ಮಿಷನ್ (NAM) ಯೋಜನೆಯ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮಾನಸಿಕ ಕಿರುಕುಳ ಮತ್ತು ಅಧಿಕಾರ ದುರ್ಬಳಕೆಯನ್ನು ತಡೆಯಲು ತಕ್ಷಣ ಕಾನೂನುಬದ್ಧ ರಕ್ಷಣೆ ಒದಗಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಗುತ್ತಿಗೆ ಆಯುಷ್ ತಜ್ಞ ವೈದ್ಯರ ಸಂಘವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಯುಷ್ ಇಲಾಖೆಯ ಆಯುಕ್ತರಿಗೆ ಪತ್ರದ ಮೂಲಕ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದೆ.

ಈ ಪ್ರಕರಣವು ಅತ್ಯಂತ ಗಂಭೀರ, ಸಂವೇದನಾಶೀಲ ಹಾಗೂ ತುರ್ತು ಸ್ವರೂಪದ್ದಾಗಿದ್ದು, ಇದನ್ನು ಇನ್ನು ನಿರ್ಲಕ್ಷಿಸಿದರೆ ಅದು ಆಡಳಿತಾತ್ಮಕ ವಿಫಲತೆ ಎಂದು ಪರಿಗಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘವು ಪತ್ರದಲ್ಲಿ ಎಚ್ಚರಿಕೆ ನೀಡಿದೆ.

ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ವಿವಿಧ ವಿಭಾಗಗಳ ತಜ್ಞ ವೈದ್ಯರುಗಳು ಕಳೆದ 12 ವರ್ಷಗಳಿಗಿಂತ ಹೆಚ್ಚು ಕಾಲ ರಾಜ್ಯದ ತಾಲೂಕು ಮಟ್ಟದ ಆಯುಷ್ ಆಸ್ಪತ್ರೆಗಳಲ್ಲಿ ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿಗೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವೆ ಇಲ್ಲದೆ ಅನೇಕ ತಾಲೂಕು ಆಸ್ಪತ್ರೆಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬುದು ವಾಸ್ತವ ಸಂಗತಿಯಾಗಿದೆ ಎಂದು ಸಂಘವು ತಿಳಿಸಿದೆ.

ಇದೇ ವೇಳೆ, ಆಯುಷ್ ಇಲಾಖೆಯಲ್ಲಿ ಖಾಯಂ ತಜ್ಞ ವೈದ್ಯರ ಕೊರತೆ ಹಾಗೂ ಸ್ಪಷ್ಟವಾದ ಕರ್ತವ್ಯ-ಜವಾಬ್ದಾರಿಗಳ ಲಿಖಿತ ಮಾರ್ಗಸೂಚಿ ಇಲ್ಲದಿರುವುದನ್ನು ಕೆಲವು ಆಡಳಿತ ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾ ಆಯುಷ್ ಅಧಿಕಾರಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ಖಂಡನೀಯವಾಗಿದೆ. ಇದರ ಪರಿಣಾಮವಾಗಿ ನಿಯಮಾನುಸಾರ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ವೈದ್ಯರ ಮೇಲೆ ನಿರಂತರ ಮಾನಸಿಕ ಒತ್ತಡ, ಬೆದರಿಕೆ, ಅವಮಾನ ಹಾಗೂ ಅಧಿಕಾರ ದುರ್ಬಳಕೆಯ ಮೂಲಕ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ.
ಇನ್ನೂ ಆತಂಕಕಾರಿ ಅಂಶವೆಂದರೆ, APPRAISAL ಎಂಬ ಹೆಸರಿನಲ್ಲಿ ಮನಬಂದಂತೆ AVERAGE ಹಾಗೂ BELOW AVERAGE ಅಂಕಗಳನ್ನು ನೀಡಿ ಗುತ್ತಿಗೆ ಸಿಬ್ಬಂದಿಗಳ ರಿನ್ಯೂವಲ್, ವೇತನ ಮತ್ತು ಭವಿಷ್ಯವನ್ನು ಅಪಾಯಕ್ಕೆ ತಳ್ಳಲಾಗುತ್ತಿದೆ. ಇದು ಸ್ಪಷ್ಟವಾಗಿ ಅಧಿಕಾರ ದುರ್ಬಳಕೆ ಹಾಗೂ ಆಡಳಿತಾತ್ಮಕ ದುರಾಚರಣೆಯಾಗಿದೆ ಎಂದು ಸಂಘವು ಹೇಳಿದೆ.
ಇದರ ಪರಿಣಾಮವಾಗಿ ಕಳೆದ ಮೂರು ತಿಂಗಳುಗಳಿಂದ ಅನೇಕ ಗುತ್ತಿಗೆ ಸಿಬ್ಬಂದಿಗಳಿಗೆ ವೇತನ ದೊರೆಯದೇ, ಅವರ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಹಾಗೂ ವೃದ್ಧ ಪೋಷಕರ ಜೀವನೋಪಾಯ ಗಂಭೀರ ಸಂಕಷ್ಟಕ್ಕೆ ತಲುಪಿದೆ. ಸರ್ಕಾರಿ ಯೋಜನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಈ ರೀತಿಯ ಅಮಾನುಷ ಪರಿಸ್ಥಿತಿಗೆ ತಳ್ಳಲ್ಪಡುವುದು ರಾಜ್ಯ ಸರ್ಕಾರಕ್ಕೆ ಶೋಭೆಯಾಗುವುದಿಲ್ಲ ಎಂದು ಸಂಘವು ಆಕ್ಷೇಪ ವ್ಯಕ್ತಪಡಿಸಿದೆ.
ಇದಲ್ಲದೆ, ಕೆಲವು ಜಿಲ್ಲೆಗಳಲ್ಲಿ ಮುಂಬರುವ ಏಪ್ರಿಲ್ ರಿನ್ಯೂವಲ್ ಪ್ರಕ್ರಿಯೆಯನ್ನು ಆಯುಧವನ್ನಾಗಿ ಮಾಡಿಕೊಂಡು, ವೈಯಕ್ತಿಕ ದ್ವೇಷದ ಆಧಾರದ ಮೇಲೆ ಗುತ್ತಿಗೆ ಸಿಬ್ಬಂದಿಗಳನ್ನು ಹೊರಗಿಡಲು ಇಲಾಖೆಯೊಳಗೇ ಸಂಘಟಿತ ಗುಂಪೊಂದು (ಸಿಂಡಿಕೇಟ್) ಕಾರ್ಯನಿರ್ವಹಿಸುತ್ತಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿಗಳು ಲಭ್ಯವಾಗಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇವು ಕೆಸಿಎಸ್‌ಆರ್ ನಿಯಮಗಳು, ಆಡಳಿತ ನೈತಿಕತೆ ಹಾಗೂ ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಸಂಘವು ತಿಳಿಸಿದೆ.
ಈ ಹಿನ್ನೆಲೆಯಲ್ಲಿ NAM ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ತಜ್ಞ ವೈದ್ಯರುಗಳು ಹಾಗೂ ಸಿಬ್ಬಂದಿಗಳ ಮೇಲೆ ನಡೆಯುತ್ತಿರುವ ಎಲ್ಲಾ ರೀತಿಯ ಅನ್ಯಾಯಗಳ ಕುರಿತು ದಾಖಲೆಗಳ ಸಮೇತ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಸಂಪೂರ್ಣ ವಿವರಗಳನ್ನು ಸಲ್ಲಿಸುಬೇಕು ಎಂದು ಹೇಳಿದೆ.
ಯಾವೆಲ್ಲಾ ವಿಷಯಗಳಿಗೆ ಕ್ರಮ
1. ಎಲ್ಲಾ ಗುತ್ತಿಗೆ ತಜ್ಞ ವೈದ್ಯರುಗಳು ಮತ್ತು ಸಿಬ್ಬಂದಿಗಳಿಗೆ ಸ್ಪಷ್ಟ ಕರ್ತವ್ಯ-ಜವಾಬ್ದಾರಿಗಳ ಮಾರ್ಗಸೂಚಿ ಪ್ರಕಟಿಸುವುದು,
2. Appraisal ಮತ್ತು ರಿನ್ಯೂವಲ್ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತಗೊಳಿಸುವುದು,
3. ಅಧಿಕಾರ ದುರ್ಬಳಕೆ ನಡೆಸುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು,
4. NAM ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಗುತ್ತಿಗೆ ಸಿಬ್ಬಂದಿಗಳಿಗೆ ಕಾನೂನುಬದ್ಧ ರಕ್ಷಣೆ ಮತ್ತು ಉದ್ಯೋಗ ಭದ್ರತೆ ಒದಗಿಸುವುದು
ಈ ಎಲ್ಲಾ ಅಂಶಗಳ ಕುರಿತು ತುರ್ತು ಪ್ರೇಮ ಕೈಗೊಳ್ಳಬೇಕಾಗಿ ಗಟ್ಟಿಯಾಗಿ ಒತ್ತಾಯಿಸುತ್ತೇವೆ. ಈ ವಿಷಯದಲ್ಲಿ ತಕ್ಷಣ ನ್ಯಾಯ ಒದಗಿಸದಿದ್ದಲ್ಲಿ ರಾಜ್ಯದ ಎಲ್ಲಾ ಗುತ್ತಿಗೆ ತಜ್ಞ ವೈದ್ಯರುಗಳು ಹಾಗೂ ಸಿಬ್ಬಂದಿಗಳ ಪರವಾಗಿ ಕಾನೂನು ಹೋರಾಟ, ಆಡಳಿತಾತ್ಮಕ ದೂರುಗಳು ಮತ್ತು ಪ್ರಜಾಸತ್ತಾತ್ಮಕ ಚಳವಳಿಗಳನ್ನು ಆರಂಭಿಸುವುದು ಅನಿವಾರ್ಯವಾಗುತ್ತದೆ, ಅದರ ಸಂಪೂರ್ಣ ಹೊಣೆಗಾರಿಕೆ ಸಂಬಂಧಪಟ್ಟ ಅಧಿಕಾರಿಗಳ ಮೇಲೇ ಇರಲಿದೆ ಎಂಬುದನ್ನು ಸ್ಪಷ್ಟವಾಗಿ ತಮ್ಮ ಗಮನಕ್ಕೆ ತರುತ್ತೇವೆ ಎಂದು ಪತ್ರದ ಮೂಲಕ ತಿಳಿಸಿದೆ.
ಇದನ್ನೂ ಓದಿ : “ಕೇಂದ್ರೀಯ ಸಂಸ್ಥೆಗಳಿಂದ ಜನರನ್ನು ರಕ್ಷಿಸಿ” | ವೇದಿಕೆಯಲ್ಲೇ ಮುಖ್ಯ ನ್ಯಾಯಮೂರ್ತಿಗಳಿಗೆ ದೀದಿ ಮನವಿ



















