ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ವ್ಯಾಪಕವಾಗಿ ಸುರಿದಿದ್ದು, ಜನ -ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಶ್ರಾವಣ ಆರಂಭದಲ್ಲಿ ಬೆಂಗಳೂರು ಕೂಡ ಸಂಪೂರ್ಣವಾಗಿ ತೊಯ್ಯಲು ಆರಂಭವಾಗಿದೆ. ಇನ್ನೂ ಐದು ದಿನ ಮಳೆಯಾಗುವ ಮುನ್ಸೂಚನೆ ಇದ್ದು, ಜನರು ಎಚ್ಚರದಿಂದ ಇರುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶ್ರಾವಣ ಸೋಮವಾರದ ಸಂಜೆ ಮತ್ತು ರಾತ್ರಿ ಸುರಿದ ಮಳೆಗೆ ಬೆಂಗಳೂರು ನಗರ ತತ್ತರಿಸಿ ಹೋಗಿದ್ದು, ರಸ್ತೆಗಳು ಜಲಾವೃತಗೊಂಡು ಎಲ್ಲೆಂದರಲ್ಲಿ ಗುಂಡಿಗಳು ಬಾಯಿ ತೆರೆದಿದ್ದವು. ಈಗ ಮತ್ತೆ ಮುಂದಿನ ಐದು ದಿನ ಸಿಲಿಕಾನ್ ಸಿಟಿಯಲ್ಲಿ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ಟ್ರಫ್ ಹಾಗೂ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಮಳೆ ಮುಂದುವರೆದಿದ್ದು, ಐದು ದಿನಗಳ ಕಾಲ ರಾಜ್ಯದಲ್ಲಿ ಮಳೆಯ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು, ಕಾರವಳಿ ಭಾಗಕ್ಕೆ ಮಳೆ ಅಲರ್ಟ್ ಘೋಷಿಸಲಾಗಿದೆ.
ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಭಾಗದಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಬಹುದು ಎನ್ನಲಾಗಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರಗಿ ಜಿಲ್ಲೆಗಳಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.