ಕತಾರ್: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಭುಗಿಲೆದ್ದಿರುವ ಸಶಸ್ತ್ರ ಸಂಘರ್ಷದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳುವ ವಿಮಾನಯಾನ ಸೇವೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಯುದ್ಧ ಸನ್ನಿವೇಶದ ಹಿನ್ನೆಲೆಯಲ್ಲಿ ನಿನ್ನೆ(ಶನಿವಾರ) ಬರೋಬ್ಬರಿ 410 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದ್ದು, ಇಂದೂ ಇದೇ ಪರಿಸ್ಥಿತಿ ಮುಂದುವರಿಯಲಿದ್ದು, ಅಂದಾಜು 444 ವಿಮಾನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದು ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.

ಮಧ್ಯಪ್ರಾಚ್ಯದಲ್ಲಿ ಮೂರು ರಾಷ್ಟ್ರಗಳ ನಡುವೆ ಏಕಾಏಕಿ ಭುಗಿಲೆದ್ದಿರುವ ಸಮರದಿಂದಾಗಿ ಆ ಭಾಗದ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಪರಿಣಾಮವಾಗಿ, ಏರ್ ಇಂಡಿಯಾ, ಇಂಡಿಗೋದಂತಹ ಪ್ರಮುಖ ಭಾರತೀಯ ವಿಮಾನಯಾನ ಸಂಸ್ಥೆಗಳು ಮಧ್ಯಪ್ರಾಚ್ಯದ ಎಲ್ಲಾ ಸ್ಥಳಗಳಿಗೆ ತೆರಳುವ ತಮ್ಮ ವಿಮಾನ ಸೇವೆಗಳನ್ನು ಸಂಪೂರ್ಣವಾಗಿ ರದ್ದು ಮಾಡಿವೆ. ಭಾರತದಿಂದ ಇಸ್ರೇಲ್‌ನ ಟೆಲ್ ಅವಿವ್‌ನತ್ತ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನವೊಂದು ವಾಯುಪ್ರದೇಶ ಬಂದ್ ಆಗಿರುವ ಕಾರಣಕ್ಕೆ ಮಧ್ಯಮಾರ್ಗದಲ್ಲೇ ಭಾರತಕ್ಕೆ ಹಿಂದಿರುಗಿದ ಬೆನ್ನಲ್ಲೇ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.
ಡಿಜಿಸಿಎಯಿಂದ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ
ಮಧ್ಯಪ್ರಾಚ್ಯ ಹಾಗೂ ಪರ್ಷಿಯನ್ ಕೊಲ್ಲಿಯ ವಾಯುಪ್ರದೇಶದಲ್ಲಿ ನಾಗರಿಕ ವಿಮಾನಯಾನಕ್ಕೆ ಉಂಟಾಗಿರುವ ತೀವ್ರ ಸ್ವರೂಪದ ಅಪಾಯಗಳನ್ನು ಅರಿತಿರುವ ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶನಿವಾರ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿಯನ್ನು ಹೊರಡಿಸಿದೆ. ಸಂಘರ್ಷ ಪೀಡಿತ ವಾಯುಪ್ರದೇಶದಲ್ಲಿ ಯಾವುದೇ ಮಟ್ಟದಲ್ಲಿ ಅಥವಾ ಎತ್ತರದಲ್ಲಿ ವಿಮಾನ ಕಾರ್ಯಾಚರಣೆ ನಡೆಸದಂತೆ ಭಾರತೀಯ ಆಪರೇಟರ್‌ಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಆಯಾ ದೇಶಗಳು ಹೊರಡಿಸುವ ಏರೋನಾಟಿಕಲ್ ಇನ್ಫಾರ್ಮೇಷನ್ ಪಬ್ಲಿಕೇಷನ್ಸ್ (AIP) ಮತ್ತು ನೋಟಾಮ್ (NOTAM) ಪ್ರಕಟಣೆಗಳನ್ನು ನಿರಂತರವಾಗಿ ಗಮನಿಸುತ್ತಿರುವಂತೆಯೂ, ಸಿರಿಯಾ ಮತ್ತು ಯೆಮೆನ್ ವಾಯುಪ್ರದೇಶದ ಕುರಿತು ಈ ಹಿಂದೆ ಹೊರಡಿಸಲಾಗಿದ್ದ ಮಾರ್ಗಸೂಚಿಗಳು ಯಥಾವತ್ತಾಗಿ ಮುಂದುವರಿಯಲಿವೆ ಎಂದೂ ಡಿಜಿಸಿಎ ಸ್ಪಷ್ಟಪಡಿಸಿದೆ.
ದುಬೈ ವಿಮಾನ ನಿಲ್ದಾಣ ಬಂದ್: ಹಲವು ಭಾರತೀಯರ ಪರದಾಟ
ಮಧ್ಯಪ್ರಾಚ್ಯದ ಹಲವು ಪ್ರದೇಶಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಪರಿಣಾಮ, ಜಗತ್ತಿನ ಅತಿ ದೊಡ್ಡ ಹಾಗೂ ಅತಿ ಹೆಚ್ಚು ಪ್ರಯಾಣಿಕರು ಓಡಾಡುವ ದುಬೈ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಸಾವಿರಾರು ಭಾರತೀಯರು ನಿಲ್ದಾಣಗಳಲ್ಲೇ ಸಿಲುಕಿ ಪರದಾಡುತ್ತಿದ್ದಾರೆ. ಮಂಗಳವಾರದಿಂದ ಆರಂಭವಾಗಲಿರುವ ‘ಆಲ್ ಇಂಗ್ಲೆಂಡ್ ಓಪನ್’ ಟೂರ್ನಿಯಲ್ಲಿ ಪಾಲ್ಗೊಳ್ಳಲು ಕನೆಕ್ಟಿಂಗ್ ಫ್ಲೈಟ್ ಮೂಲಕ ದುಬೈ ಮಾರ್ಗವಾಗಿ ಬರ್ಮಿಂಗ್‌ಹ್ಯಾಮ್‌ಗೆ ತೆರಳುತ್ತಿದ್ದ ಭಾರತದ ತಾರಾ ಶಟ್ಲರ್, ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಕೂಡ ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ಇದೇ ರೀತಿ, ‘ಫಿಬಾ (FIBA) ಬ್ಯಾಸ್ಕೆಟ್‌ಬಾಲ್ ವಿಶ್ವಕಪ್ 2027ರ ಏಷ್ಯನ್ ಕ್ವಾಲಿಫೈಯರ್ಸ್’ ಪಂದ್ಯದಲ್ಲಿ ಭಾಗವಹಿಸಿದ್ದ ಭಾರತೀಯ ಪುರುಷರ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ತಂಡವು ಕತಾರ್‌ನ ದೋಹಾದಲ್ಲಿ ಮುಂದಿನ ಪ್ರಯಾಣ ಬೆಳೆಸಲಾಗದೆ ಅತಂತ್ರವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಇಸ್ರೇಲ್-ಅಮೆರಿಕ ವಿರುದ್ಧ ‘ಅತ್ಯಂತ ಭೀಕರ ಪ್ರತಿದಾಳಿ’ಗೆ ಇರಾನ್ ಶಪಥ



















