ನವದೆಹಲಿ: ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ವಕ್ಫ್ (ತಿದ್ದುಪಡಿ) ಮಸೂದೆಗೆ (Waqf Bill) ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಸುದೀರ್ಘ ಚರ್ಚೆ ಹಾಗೂ ಪ್ರತಿಪಕ್ಷಗಳ ವಿರೋಧದ ಮಧ್ಯೆಯೇ ತಡರಾತ್ರಿ ಅಂಗೀಕಾರ ದೊರೆತಿದೆ.
ಬುಧವಾರ ತಡರಾತ್ರಿಯವರೆಗೆ ವಕ್ಫ್ ಮಸೂದೆ ಕುರಿತು ಚರ್ಚೆ ನಡೆಯಿತು. ಕೊನೆಗೆ ರಾತ್ರಿ 1.15ರ ಸುಮಾರಿಗೆ ಸ್ಪೀಕರ್ ಅವರು ಮಸೂದೆಯ ಕುರಿತು ಮತದಾನಕ್ಕೆ ಅವಕಾಶ ನೀಡಿದರು. ಒಟ್ಟು 520 ಮತಗಳು ಚಲಾವಣೆಯಾದವು. ಮಸೂದೆಯ ಪರವಾಗಿ 288 ಮತಗಳು ಚಲಾವಣೆಯಾದರೆ, 232 ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದರೊಂದಿಗೆ ಮಸೂದೆಗೆ ಅಂಗೀಕಾರ ದೊರೆಯಿತು.
ಮೂಲಗಳ ಪ್ರಕಾರ ಶೀಘ್ರದಲ್ಲೇ ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಲಿದೆ. ಮೇಲ್ಮನೆಯಲ್ಲೂ ಅಂಗೀಕಾರ ದೊರೆತರೆ, ಐತಿಹಾಸಿಕ ವಕ್ಫ್ ಕಾಯ್ದೆಗೆ ತಿದ್ದುಪಡಿ ಜಾರಿಗೆ ಬಂದಂತಾಗಲಿದೆ.
ನೂತನ ತಿದ್ದುಪಡಿ ಮಸೂದೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ದೇಶದ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂಬುದಾಗಿ ಘೋಷಿಸಲು ಅಂಕುಶ ಹಾಕಲಾಗಿದೆ. ಹಾಗೆಯೇ, ವಕ್ಫ್ ಮಂಡಳಿಯಲ್ಲಿ ಹೆಣ್ಣುಮಕ್ಕಳ ಸದಸ್ಯತ್ವವನ್ನು ಕೂಡ ಖಾತರಿಪಡಿಸಲಾಗಿದೆ. ಇದರ ಜತೆಗೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಇದಕ್ಕೆ ಎಐಎಂಐಎಂ ಸೇರಿ ಹಲವು ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.