ನವದಹೆಲಿ: ಭಾರೀ ವಿವಾದಕ್ಕೆ ಕಾರಣವಾಗಿದ್ದ ವಕ್ಫ್ ತಿದ್ದುಪಡಿ ಮಸೂದೆ 2025(Waqf Amendment Bill), ಏಪ್ರಿಲ್ 3ರಂದು ತಡರಾತ್ರಿ 2.30ರ ವೇಳೆಗೆ ರಾಜ್ಯಸಭೆಯಲ್ಲಿಯೂ ಅಂಗೀಕಾರಗೊಂಡಿದೆ. ಸುದೀರ್ಘ 13 ಗಂಟೆಗೂ ಹೆಚ್ಚು ಕಾಲ ನಡೆದ ಚರ್ಚೆಯ ಬಳಿಕ ರಾತ್ರಿ 2 ಗಂಟೆಯ ಬಳಿಕ ಮಸೂದೆಯನ್ನು ಮತಕ್ಕೆ ಹಾಕಲಾಗಿದ್ದು, ಮಸೂದೆ ಪರವಾಗಿ 128 ಮತಗಳು ಸಿಕ್ಕರೆ, ವಿರುದ್ಧವಾಗಿ 95 ಮತಗಳು ಚಲಾವಣೆಯಾದವು. ಈ ವಿಧೇಯಕ ಏ.2ರ ತಡರಾತ್ರಿ ಲೋಕಸಭೆಯಲ್ಲಿ 288-232 ಮತಗಳಿಂದ ಅಂಗೀಕಾರಗೊಂಡಿತ್ತು.
ರಾಜ್ಯಸಭೆಯಲ್ಲಿ ಗುರುವಾರ ಮಧ್ಯಾಹ್ನ ಆರಂಭವಾದ ಚರ್ಚೆ ತಡರಾತ್ರಿಯವರೆಗೂ ಮುಂದುವರೆಯಿತು. ಚರ್ಚೆಯಲ್ಲಿ ಎನ್‌ಡಿಎ ಮತ್ತು ಪ್ರತಿಪಕ್ಷ ಇಂಡಿಯಾ ಬ್ಲಾಕ್ ನಡುವೆ ಭಾರೀ ವಾಗ್ವಾದ ನಡೆಯಿತು. ವಿರೋಧ ಪಕ್ಷಗಳು ಈ ಮಸೂದೆಯನ್ನು “ಮುಸ್ಲಿಂ ವಿರೋಧಿ” ಮತ್ತು “ಸಂವಿಧಾನ ವಿರೋಧಿ” ಎಂದು ಟೀಕಿಸಿದರೆ, ಕೇಂದ್ರ ಸರ್ಕಾರವು ಇದು ಮುಸ್ಲಿಂ ಸಮುದಾಯಕ್ಕೆ ಅನುಕೂಲ ಕಲ್ಪಿಸುವಂಥ, ವಕ್ಫ್ ಆಡಳಿತದಲ್ಲಿ ಪಾರದರ್ಶಕತೆ ತರುವ ಸುಧಾರಣಾ ವಿಧೇಯಕ ಎಂದು ಪ್ರತಿಪಾದಿಸಿತು.
ಮುಂದೇನು?
ಸಂಸತ್‌ನ ಅನುಮೋದನೆ ಪಡೆದಿರುವ ಈ ವಿಧೇಯಕವನ್ನು ಅಂಗೀಕಾರಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರವಾನೆ ಮಾಡಲಾಗುತ್ತದೆ. ಅವರು ಅಂಕಿತ ಹಾಕಿದ ಬಳಿಕ, ಕೇಂದ್ರ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಬೀಳುತ್ತದೆ.
ಲೋಕಸಭೆಯಲ್ಲಿ ಚರ್ಚೆ
ಇದಕ್ಕೂ ಮುನ್ನ, ಬುಧವಾರ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದರು. ಗೃಹ ಸಚಿವ ಅಮಿತ್ ಶಾ, ಅನುರಾಗ್ ಠಾಕೂರ್, ಕಾಂಗ್ರೆಸ್ ಸಂಸದ ಗೌರವ್ ಗೊಗೋಯಿ, ಟಿಎಂಸಿ, ಸಮಾಜವಾದಿ ಪಕ್ಷ, ಸಿಪಿಎಂ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಸಂಸದರು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಿದ್ದರು. ಎನ್‌ಡಿಎ ಮಿತ್ರಪಕ್ಷಗಳ ಬೆಂಬಲದಿಂದ ಮಸೂದೆಯು ಲೋಕಸಭೆಯಲ್ಲಿ ಯಶಸ್ವಿಯಾಗಿ ಅಂಗೀಕಾರಗೊಂಡಿತು.
ಮಸೂದೆಯನ್ನು “ಯುನಿಫೈಡ್ ವಕ್ಫ್ ಮ್ಯಾನೇಜ್‌ಮೆಂಟ್ ಎಂಪವರ್‌ಮೆಂಟ್, ಎಫಿಷಿಯೆನ್ಸಿ ಆಂಡ್ ಡೆವಲಪ್‌ಮೆಂಟ್ (ಉಮ್ಮೀದ್)” ಎಂದು ಮರುನಾಮಕರಣ ಮಾಡಲಾಗಿರುವ ವಿಚಾರವನ್ನೂ ರಿಜಿಜು ತಿಳಿಸಿದರು.
ಮಸೂದೆಯ ಪ್ರಮುಖ ಅಂಶಗಳು
ಹೊಸ ಮಸೂದೆ ಪ್ರಕಾರ, ಜಿಲ್ಲಾಧಿಕಾರಿಗಳು ವಕ್ಫ್ ಆಸ್ತಿಗಳ ಸಮೀಕ್ಷೆ ನಡೆಸುತ್ತಾರೆ. ಇದರಿಂದ ವಕ್ಫ್ ಬೋರ್ಡ್ಗಳ ಪರಮಾಧಿಕಾರಕ್ಕೆ ಕಡಿವಾಣ ಬೀಳಲಿದೆ. ವಕ್ಫ್ ಮಂಡಳಿಗಳಲ್ಲಿ ಎರಡು ಮುಸ್ಲಿಮೇತರ ಸದಸ್ಯರು ಮತ್ತು ಕೇಂದ್ರ ವಕ್ಫ್ ಕೌನ್ಸಿಲ್‌ನಲ್ಲಿ ಗರಿಷ್ಠ ನಾಲ್ಕು ಮುಸ್ಲಿಮೇತರ ಸದಸ್ಯರು (ಇಬ್ಭರು ಮಹಿಳೆಯರು ಸೇರಿದಂತೆ) ಕಡ್ಡಾಯವಾಗಿ ಇರುತ್ತಾರೆ. ಮಂಡಳಿಗಳಿಗೆ ಆಸ್ತಿಯನ್ನು ವಕ್ಫ್ ಎಂದು ಘೋಷಿಸುವ ನೇರ ಅಧಿಕಾರವನ್ನು ತೆಗೆದುಹಾಕಲಾಗುತ್ತದೆ. ಆಸ್ತಿ ನೋಂದಣಿಗಾಗಿ ಕೇಂದ್ರೀಕೃತ ಪೋರ್ಟಲ್ ಸ್ಥಾಪನೆ ಮತ್ತು ತಂತ್ರಜ್ಞಾನದ ಬಳಕೆ ಮಾಡಲಾಗುತ್ತದೆ. ವರ್ಷಕ್ಕೆ 1 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಗಳಿಸುವ ವಕ್ಫ್ ಸಂಸ್ಥೆಗಳಿಗೆ ರಾಜ್ಯ-ಪ್ರಾಯೋಜಿತ ಆಡಿಟ್ ಕಡ್ಡಾಯವಾಗಿರುತ್ತದೆ.
ಸರ್ಕಾರದ ಸಮರ್ಥನೆ
ಗೃಹ ಸಚಿವ ಅಮಿತ್ ಶಾ ಮಸೂದೆ ಕುರಿತು ಮಾತನಾಡಿ, “ಈ ಮಸೂದೆಯು ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಹೊಂದಿಲ್ಲ, ಇದು ಆಡಳಿತ ಸುಧಾರಣೆ ಮತ್ತು ಪಾರದರ್ಶಕತೆಗಾಗಿ ಮಾತ್ರ” ಎಂದು ಒತ್ತಿ ಹೇಳಿದ್ದಾರೆ. ಸಚಿವ ರಿಜಿಜು ಅವರು, “ಈ ಮಸೂದೆಯು ಶಿಯಾ, ಸುನ್ನಿ, ಬೋಹ್ರಾ, ಮಹಿಳೆಯರು ಮತ್ತು ಹಿಂದುಳಿದ ಮುಸ್ಲಿಮರಿಗೆ ಪ್ರಾತಿನಿಧ್ಯ ನೀಡುತ್ತದೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಮಸೂದೆಯ ಅಂಗೀಕಾರವನ್ನು “ಸಾಮಾಜಿಕ-ಆರ್ಥಿಕ ನ್ಯಾಯ, ಸಮಗ್ರ ಬೆಳವಣಿಗೆ ಮತ್ತು ಪಾರದರ್ಶಕತೆಯ ಒಂದು ಐತಿಹಾಸಿಕ ಹಾಗೂ ಮಹತ್ವದ ಕ್ಷಣ” ಎಂದು ಬಣ್ಣಿಸಿದ್ದಾರೆ.
ವಿಪಕ್ಷಗಳ ಆಕ್ರೋಶ
ಕಾಂಗ್ರೆಸ್, ಸಮಾಜವಾದಿ ಪಕ್ಷ, ಟಿಎಂಸಿ, ಸಿಪಿಎಂ, ಎಐಎಂಐಎಂ ಸೇರಿದಂತೆ ವಿರೋಧ ಪಕ್ಷಗಳು ಈ ಮಸೂದೆಯನ್ನು ತೀವ್ರವಾಗಿ ಖಂಡಿಸಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, “ಈ ವಿಧೇಯಕ ಸಂವಿಧಾನ ವಿರೋಧಿಯಾಗಿದ್ದು, ಸಂವಿಧಾನದ ಸಮಾನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳನ್ನು ಉಲ್ಲಂಘಿಸುತ್ತದೆ” ಎಂದು ಆರೋಪಿಸಿದ್ದಾರೆ. ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ, “ಇದು ಸಂವಿಧಾನದ 26ನೇ ವಿಧಿಯ ಉಲ್ಲಂಘನೆಯಾಗಿದ್ದು, ಮುಸ್ಲಿಮರ ಹಕ್ಕುಗಳನ್ನು ಕಸಿಯುತ್ತದೆ” ಎಂದು ಕಿಡಿಕಾರಿದ್ದರು. ಸೋನಿಯಾ ಗಾಂಧಿ ಅವರು ಇದನ್ನು “ಸಂವಿಧಾನದ ಮೇಲಿನ ದಾಳಿ” ಎಂದು ಬಣ್ಣಿಸಿದರು.