ಬೆಂಗಳೂರು: ದಿನ ಬೆಳಗಾದರೆ ಡಿಜಿಟಲ್ ವಂಚನೆ, ಸೈಬರ್ ಅಪರಾಧ, ಡಿಜಿಟಲ್ ಅರೆಸ್ಟ್ ಸೇರಿ ಹತ್ತಾರು ವಂಚನೆಯ ಮಾರ್ಗಗಳನ್ನು ಅನುಸರಿಸಿ ದುರುಳರು ಕೋಟ್ಯಂತರ ರೂ. ಲಪಟಾಯಿಸಿದರು ಎಂಬುದನ್ನು ಕೇಳುತ್ತೇವೆ, ಓದುತ್ತೇವೆ. ಇದನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಈಗ ಐತಿಹಾಸಿಕ ಹೆಜ್ಜೆ ಇರಿಸಿದೆ. ಹೌದು, “ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ” ಹೆಸರಿನಲ್ಲಿ ಆರ್ ಬಿಐ ವಾಟ್ಸ್ಆ್ಯಪ್ ಚಾನೆಲ್ ರಚಿಸಿದೆ. ಚಾನೆಲ್ ಸೇರಿಕೊಳ್ಳುವ ಮೂಲಕ ಡಿಜಿಟಲ್ ವಂಚನೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಭೌಗೋಳಿಕ ಪ್ರದೇಶವನ್ನು ಲೆಕ್ಕಿಸದ, ‘ಭಾರತೀಯ ರಿಸರ್ವ್ ಬ್ಯಾಂಕ್’ WhatsApp ಖಾತೆ ಮೂಲಕ, ದೇಶಾದ್ಯಾಂತ ಎಲ್ಲರಿಗೂ ಹಣಕಾಸು ಮಾಹಿತಿಯನ್ನು ಸರಳವಾಗಿ ತಲುಪಿಸುವುದು ನಮ್ಮ ಗುರಿಯಾಗಿದೆ ಎಂದು ಆರ್ ಬಿಐ ತಿಳಿಸಿದೆ. ಜನರು ಉತ್ತಮ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ವಂಚನೆಗಳನ್ನು ತಪ್ಪಿಸಲು ಸಹಾಯ ಮಾಡುವುದರ ಮೂಲಕ, ದೇಶದ ಹಣಕಾಸು ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಸುರಕ್ಷತೆ ಹೆಚ್ಚಿಸುವುದು ಕೂಡ ಉದ್ದೇಶವಾಗಿದೆ ಎಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ.
ವಾಟ್ಸ್ ಆ್ಯಪ್ ಚಾನೆಲ್ ಸೇರುವುದು ಹೇಗೆ?
- ಭಾರತೀಯ ರಿಸರ್ವ್ ಬ್ಯಾಂಕಿನ ವೆಬ್ ಸೈಟ್ ಅಥವಾ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಗಳಲ್ಲಿ ಹಂಚಿದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಇದು ನಿಮ್ಮನ್ನು ನೇರವಾಗಿ ಆರ್ ಬಿಐ WhatsApp ಚಾನೆಲ್ ಗೆ ಕರೆದೊಯ್ಯುತ್ತದೆ.
- ಅಲ್ಲಿ Join ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
- ನೀವೀಗ ಆರ್ ಬಿಐನ ಪರಿಶೀಲಿತ WhatsApp ಖಾತೆಯಿಂದ ಮಾಹಿತಿ ಪಡೆಯಬಹುದು
ಹಕ್ಕುಗಳ ಮಾಹಿತಿಯೂ ಲಭ್ಯ
ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ ಚಟುವಟಿಕೆಗಳು, ವಂಚನೆಯಿಂದ ತಪ್ಪಿಸಿಕೊಳ್ಳಲು ಅನುಸರಿಸಬೇಕಾದ ಮಾರ್ಗಗಳ ಜತೆಗೆ ಬ್ಯಾಂಕಿಂಗ್, ಹಣಕಾಸು ಕುರಿತಂತೆ ಜನರಿಗೆ ಇರುವ ಹಕ್ಕುಗಳ ಮಾಹಿತಿಯನ್ನೂ ವಾಟ್ಸ್ಆ್ಯಪ್ ಚಾನೆಲ್ ನಲ್ಲಿ ಪಡೆಯಬಹುದಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರ ಹಕ್ಕುಗಳು, ನಕಲಿ ಸುದ್ದಿಗಳ ಕುರಿತು ಸ್ಪಷ್ಟನೆ ಸೇರಿ ಹತ್ತಾರು ಮಾಹಿತಿಯನ್ನು ಪಡೆಯಬಹುದಾಗಿದೆ.