ನಿವೃತ್ತಿಯ ಬಳಿಕ ಜೀವನ ಸಾಗಿಸುವುದು ಹೇಗೆ? ಆಗ ಪಿಂಚಣಿ ಪಡೆಯಲು ಒಳ್ಳೆಯ ಯೋಜನೆಗಳು ಇವೆಯಾ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ, ಚಿಂತೆ ಬೇಡ. ಎಲ್ಐಸಿಯ ಜೀವನ ಶಾಂತಿ ಹೂಡಿಕೆ ಯೋಜನೆಯು ನಿಮಗೆ ಸುವರ್ಣಾವಕಾಶ ಕಲ್ಪಿಸಿದೆ. ನೀವು ಒಂದು ಸಲ 10 ಲಕ್ಷ ರೂಪಾಯಿ ಪ್ರೀಮಿಯಂ ಪಾವತಿಸಿದರೆ ಸಾಕು, ಹೂಡಿಕೆ ಮಾಡಿದ 12 ವರ್ಷಗಳ ಬಳಿಕ ನಿಮಗೆ ಜೀವಿತಾವಧಿವರೆಗೆ ಮಾಸಿಕ 11 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ. 30-79 ವರ್ಷದೊಳಗಿನವರು ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಹೀಗಿದೆ ಹೂಡಿಕೆ ಲೆಕ್ಕಾಚಾರ
ನೀವು ನಿವೃತ್ತಿ ನಂತರ ಪ್ರತಿ ತಿಂಗಳು 11 ಸಾವಿರ ರೂಪಾಯಿ ಪಿಂಚಣಿ ಪಡೆಯಬೇಕು ಎಂದರೆ, 12 ವರ್ಷ ಮೊದಲೇ ಹೂಡಿಕೆ ಮಾಡಬೇಕು. ನಿಮಗೀಗ 48 ವರ್ಷ ವಯಸ್ಸು. ಇನ್ನು 12 ವರ್ಷದಲ್ಲಿ ಅಂದರೆ, 60ನೇ ವರ್ಷಕ್ಕೆ ನಿವೃತ್ತರಾಗುತ್ತೀರಿ. ನಿವೃತ್ತಿ ನಂತರ ನಿಮಗೆ 11 ಸಾವಿರ ರೂಪಾಯಿ ಪೆನ್ಶನ್ ಬರಬೇಕು ಅಂದರೆ, ನೀವೀಗ 10 ಲಕ್ಷ ರೂಪಾಯಿ ಪ್ರೀಮಿಯಂ ಪಾವತಿಸಬೇಕು.
ನೀವು 60 ವರ್ಷ ದಾಟಿದ ಬಳಿಕ ನಿಮಗೆ ಮಾಸಿಕ 11 ಸಾವಿರ ರೂ. ಪಿಂಚಣಿ ದೊರೆಯುತ್ತದೆ. ವರ್ಷದ ಲೆಕ್ಕದಲ್ಲಿ 1,42,500 ಪಿಂಚಣಿ ಸಿಗುತ್ತದೆ. ಆರು ತಿಂಗಳಿಗೆ ಪಡೆದರೆ 69,825 ರೂಪಾಯಿ ಹಾಗೂ ಮೂರು ತಿಂಗಳಿಗೊಮ್ಮೆ ಆದರೆ 34,556 ರೂಪಾಯಿ ಪಿಂಚಣಿ ಪಡೆಯಬಹುದು. ಈ ಪಿಂಚಣಿ ಜೀವಿತಾವಧಿಯವರೆಗೆ ಬರುತ್ತಲೇ ಇರುತ್ತದೆ.
ಹೂಡಿಕೆಯಲ್ಲಿವೆ ಎರಡು ವಿಧಗಳು
ಎಲ್ಐಸಿ ಹೂಡಿಕೆಯಲ್ಲಿಯೇ ಎರಡು ಮಾದರಿಯ ಪ್ಲಾನ್ ಗಳಿವೆ. ಸಿಂಗಲ್ ಲೈಫ್ ಪ್ಲಾನ್ ಹಾಗೂ ಜಾಯಿಂಟ್ ಲೈಫ್ ಪ್ಲಾನ್ ಎಂಬ ಮಾದರಿಗಳಿವೆ. ಸಿಂಗಲ್ ಲೈಫ್ ಪ್ಲಾನ್ ನಲ್ಲಿ ಒಮ್ಮೆ ಹೂಡಿಕೆ ಮಾಡಬೇಕು. ಡಿಫರ್ ಮೆಂಟ್ ಅವಧಿಯ ಬಳಿಕ ಪಿಂಚಣಿ ಪಡೆಯುತ್ತಾರೆ. ಹಾಗೊಂದು ವೇಳೆ ಪಾಲಿಸಿ ಮಾಡಿಸಿದವರು ಮೃತಪಟ್ಟರೆ, ಅವರು ಮಾಡಿದ ಹೂಡಿಕೆ ಮೊತ್ತವನ್ನು ನಾಮಿನಿಗಳಿಗೆ ನೀಡಲಾಗುತ್ತದೆ.
ಜಾಯಿಂಟ್ ಲೈಫ್ ಪ್ಲಾನ್ ನಲ್ಲಿ ಪಾಲಿಸಿದಾರರ ಜತೆಗೆ ಇನ್ನೊಬ್ಬರು (ಸಾಮಾನ್ಯವಾಗಿ ಪತ್ನಿ ಅಥವಾ ಪತಿ) ರಕ್ಷಣೆ ಪಡೆಯುತ್ತಾರೆ. ಡಿಫರ್ ಮೆಂಟ್ ಅವಧಿ ಮುಗಿದ ನಂತರ, ಪಿಂಚಣಿ ಆರಂಭವಾಗುತ್ತದೆ. ಪಾಲಿಸಿದಾರರು ಮೃತಪಟ್ಟರೆ ಅವರ ಸಂಗಾತಿಗೆ ಪಿಂಚಣಿ ಲಭಿಸುತ್ತದೆ. ಇಬ್ಬರೂ ಮೃತಪಟ್ಟರೆ, ಹೂಡಿಕೆಯ ಮೊತ್ತ ನಾಮನಿರ್ದೇಶಿತರಿಗೆ ಸಿಗಲಿದೆ.