ಲಂಡನ್ : ಕ್ರಿಕೆಟ್ ಜಗತ್ತಿನಲ್ಲಿ ಸದಾ ಕಾಲ ಚರ್ಚೆಯಲ್ಲಿರುವ ವಿಷಯವೆಂದರೆ ಅದು “ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಇವರಲ್ಲಿ ಯಾರು ಶ್ರೇಷ್ಠ?” ಎಂಬುದು. ಎರಡು ವಿಭಿನ್ನ ಕಾಲಘಟ್ಟದ ಈ ಇಬ್ಬರು ದಿಗ್ಗಜರ ನಡುವಿನ ಹೋಲಿಕೆ ಅಭಿಮಾನಿಗಳ ನಡುವೆ ನಡೆಯುತ್ತಲೇ ಇರುತ್ತದೆ. ಇದೀಗ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಈ ಚರ್ಚೆಗೆ ತಮ್ಮದೇ ಆದ ಶೈಲಿಯಲ್ಲಿ ಉತ್ತರ ನೀಡುವ ಮೂಲಕ ಪೂರ್ಣವಿರಾಮ ಇಟ್ಟಿದ್ದಾರೆ.
ಇತ್ತೀಚೆಗೆ ನಡೆದ ‘ರಾಪಿಡ್ ಫೈರ್’ (Rapid Fire) ಸುತ್ತಿನಲ್ಲಿ ಭಾಗವಹಿಸಿದ್ದ ಪೀಟರ್ಸನ್, ಹಲವು ಕ್ರಿಕೆಟ್ ದಿಗ್ಗಜರ ಹೆಸರಿನೊಂದಿಗೆ ತಮ್ಮನ್ನು ಹಾಗೂ ಇತರರನ್ನು ಹೋಲಿಕೆ ಮಾಡಿಕೊಂಡರು. ಅಂತಿಮವಾಗಿ ಸಚಿನ್ ಮತ್ತು ವಿರಾಟ್ ನಡುವೆ ಒಬ್ಬರನ್ನು ಆಯ್ಕೆ ಮಾಡುವ ಸಂದರ್ಭ ಬಂದಾಗ ಅವರು ನೀಡಿದ ಉತ್ತರ ಅಚ್ಚರಿ ಮೂಡಿಸಿದೆ.
ತನ್ನನ್ನು ತಾನೇ ಶ್ರೇಷ್ಠ ಅಂದುಕೊಂಡ ಕೆಪಿ!
ರಾಪಿಡ್ ಫೈರ್ ಸುತ್ತಿನ ಆರಂಭದಲ್ಲಿ ಪೀಟರ್ಸನ್, ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್, ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರಂತಹ ದಿಗ್ಗಜರಿಗಿಂತ ತಾನೇ ಉತ್ತಮ ಎಂದು ಹೇಳಿಕೊಂಡರು. ಆದರೆ, ಯಾವಾಗ ಭಾರತದ ‘ದಿ ವಾಲ್’ ರಾಹುಲ್ ದ್ರಾವಿಡ್ ಹೆಸರು ಬಂತೋ, ತಕ್ಷಣವೇ ಪೀಟರ್ಸನ್ ತಮ್ಮ ಸೋಲನ್ನು ಒಪ್ಪಿಕೊಂಡರು. “ದ್ರಾವಿಡ್ ನನಗಿಂತ ಉತ್ತಮ ಆಟಗಾರ” ಎಂದು ಹೇಳುವ ಮೂಲಕ ದ್ರಾವಿಡ್‌ಗೆ ಗೌರವ ಸಲ್ಲಿಸಿದರು.
ದ್ರಾವಿಡ್ ಮತ್ತು ಕೊಹ್ಲಿ ನಡುವೆ ಕಠಿಣ ಸ್ಪರ್ಧೆ:
ನಂತರ ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ನಡುವೆ ಯಾರನ್ನಾದರೂ ಒಬ್ಬರನ್ನು ಆರಿಸುವ ಸರದಿ ಬಂತು. ಈ ಹಂತದಲ್ಲಿ ಪೀಟರ್ಸನ್ ಸ್ವಲ್ಪ ಸಮಯ ತೆಗೆದುಕೊಂಡರು. ಅಂತಿಮವಾಗಿ ದ್ರಾವಿಡ್ ಬದಲಿಗೆ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿದರು. ಮುಂದುವರಿದು, ಆಧುನಿಕ ಕ್ರಿಕೆಟ್‌ನ ‘ಫ್ಯಾಬ್ ಫೋರ್’ (Fab Four) ಎಂದು ಕರೆಯಲ್ಪಡುವ ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಜೋ ರೂಟ್ (ಇಂಗ್ಲೆಂಡ್) ಮತ್ತು ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್) ಅವರಿಗಿಂತ ವಿರಾಟ್ ಕೊಹ್ಲಿಯೇ ಶ್ರೇಷ್ಠ ಎಂದು ಪೀಟರ್ಸನ್ ನಿರ್ಧರಿಸಿದರು. ಜೋ ರೂಟ್ ಮತ್ತು ಕೊಹ್ಲಿ ನಡುವಿನ ಆಯ್ಕೆ ಸ್ವಲ್ಪ ಕಷ್ಟಕರವಾಗಿತ್ತಾದರೂ, ಅಂತಿಮವಾಗಿ ಕೊಹ್ಲಿಯೇ ಫೈನಲ್ ರೌಂಡ್‌ಗೆ ಪ್ರವೇಶಿಸಿದರು.
ಸಚಿನ್ vs ವಿರಾಟ್: ಅಂತಿಮ ತೀರ್ಪು!
ಕೊನೆಯ ಸುತ್ತಿನಲ್ಲಿ ವಿರಾಟ್ ಕೊಹ್ಲಿ ಮತ್ತು ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ನಡುವೆ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಈ ವೇಳೆ ಕಿಂಚಿತ್ತೂ ಯೋಚಿಸದ ಕೆವಿನ್ ಪೀಟರ್ಸನ್, ತಕ್ಷಣವೇ “ವಿರಾಟ್ ಕೊಹ್ಲಿ” ಎಂದು ಉತ್ತರಿಸಿದರು. ಈ ಮೂಲಕ ತಮ್ಮ ಪ್ರಕಾರ ಸಚಿನ್ ತೆಂಡೂಲ್ಕರ್ ಅವರಿಗಿಂತ ವಿರಾಟ್ ಕೊಹ್ಲಿಯೇ ಶ್ರೇಷ್ಠ ಆಟಗಾರ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ದಾಖಲೆಗಳ ಸರದಾರ ಕೊಹ್ಲಿ :
ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಸಚಿನ್ ಅವರ ಮತ್ತೊಂದು ದಾಖಲೆಯನ್ನು ಮುರಿದಿದ್ದಾರೆ. ಕೇವಲ 594 ಇನ್ನಿಂಗ್ಸ್‌ಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27,000 ರನ್ ಪೂರೈಸುವ ಮೂಲಕ, ಅತ್ಯಂತ ವೇಗವಾಗಿ ಈ ಮೈಲಿಗಲ್ಲು ತಲುಪಿದ ಆಟಗಾರ ಎನಿಸಿಕೊಂಡಿದ್ದಾರೆ. ಟೆಸ್ಟ್ ಮತ್ತು ಟಿ20 ಮಾದರಿಯಿಂದ ನಿವೃತ್ತಿ ಹೊಂದಿದ್ದರೂ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕೊಹ್ಲಿ ತಮ್ಮ ರನ್ ವೇಟೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ : ಟೀಮ್ ಇಂಡಿಯಾದ ವಿಶ್ವಕಪ್ ಕನಸಿಗೆ ಎದುರಾಳಿಗಳಿಗಿಂತ ಕೋಚ್ ಗೌತಮ್ ಗಂಭೀರ್ ಅವರೇ ದೊಡ್ಡ ವಿಲನ್ ಆಗಲಿದ್ದಾರಾ?



















