ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರಲ್ಲಿ ಇತಿಹಾಸ ನಿರ್ಮಿಸುವ ಸನಿಹದಲ್ಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 13,000 ರನ್‌ಗಳ ಮೈಲಿಗಲ್ಲನ್ನು ತಲುಪುವ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಗೆ ಅವರು ಕೇವಲ 24 ರನ್‌ಗಳಷ್ಟೇ ದೂರದಲ್ಲಿದ್ದಾರೆ. ಈ ಸಾಧನೆಯನ್ನು ಗುಜರಾತ್ ಟೈಟಾನ್ಸ್ (GT) ವಿರುದ್ಧ ಏಪ್ರಿಲ್ 2, 2025ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮಾಡುವ ಸಾಧ್ಯತೆಯಿದೆ.
ಕೊಹ್ಲಿಯ ಟಿ20 ಪಯಣ
ವಿರಾಟ್ ಕೊಹ್ಲಿ ತಮ್ಮ ಟಿ20 ವೃತ್ತಿಜೀವನವನ್ನು 2007ರಲ್ಲಿ ದೆಹಲಿ ತಂಡದ ಪರ ಆರಂಭಿಸಿದರು. 2008ರಲ್ಲಿ ಐಪಿಎಲ್‌ನ ಮೊದಲ ಆವೃತ್ತಿಯಲ್ಲಿ RCB ತಂಡದಲ್ಲಿ ಚೊಚ್ಚಲ ಪಂದ್ಯ ಆಡಿದ ಅವರು, ಆ ನಂತರ ತಮ್ಮ ಅಸಾಧಾರಣ ಪ್ರತಿಭೆಯಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡರು. ಭಾರತ ತಂಡದ ಪರ 2010ರಲ್ಲಿ ಜಿಂಬಾಬ್ವೆ ವಿರುದ್ಧ ಟಿ20ಐ ಚೊಚ್ಚಲ ಪಂದ್ಯ ಆಡಿದ ಕೊಹ್ಲಿ, ಈಗ ತಮ್ಮ 384 ಇನಿಂಗ್ಸ್‌ಗಳಲ್ಲಿ 12,976 ರನ್‌ಗಳನ್ನು ಗಳಿಸಿದ್ದಾರೆ. ಈ ಸಾಧನೆಯಲ್ಲಿ 9 ಶತಕಗಳು ಮತ್ತು 98 ಅರ್ಧಶತಕಗಳು ಸೇರಿವೆ, ಜೊತೆಗೆ 420 ಸಿಕ್ಸರ್‌ಗಳು ಮತ್ತು 1,150 ಬೌಂಡರಿಗಳನ್ನು ಅವರು ಸಿಡಿಸಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ
ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಈಗಾಗಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. 8,000ಕ್ಕೂ ಅಧಿಕ ರನ್‌ಗಳನ್ನು ಗಳಿಸಿರುವ ಅವರು, ಈ ಟೂರ್ನಿಯಲ್ಲಿ ಏಕೈಕ ಆಟಗಾರರಾಗಿ ಈ ಮೈಲಿಗಲ್ಲನ್ನು ಮುಟ್ಟಿದ್ದಾರೆ. 2024ರ ಟಿ20 ವಿಶ್ವಕಪ್ ಗೆದ್ದ ನಂತರ ಟಿ20ಐ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರೂ, ಐಪಿಎಲ್‌ನಲ್ಲಿ ತಮ್ಮ ಆಟವನ್ನು ಮುಂದುವರಿಸಿದ್ದಾರೆ. ಈ ಋತುವಿನಲ್ಲಿ ಈಗಾಗಲೇ ಎರಡು ಪಂದ್ಯಗಳಲ್ಲಿ 90 ರನ್ ಗಳ ಗಳಿಸಿರುವ ಕೊಹ್ಲಿ, ತಮ್ಮ ಉತ್ತಮ ಫಾರ್ಮ್ ಅನ್ನು ತೋರಿಸಿದ್ದಾರೆ.
ರೋಹಿತ್ಗೆ ಎರಡನೇ ಸ್ಥಾನ
11851 ಟಿ20 ರನ್‌ಗಳನ್ನು ಸಿಡಿಸಿರುವ ರೋಹಿತ್ ಶರ್ಮಾ ಈ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2007ರಲ್ಲಿ ಭಾರತ ತಂಡದ ಮಾಜಿ ನಾಯಕ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2007ರ ಐಸಿಸಿ ಟಿ20 ವಿಶ್ವಕಪ್ ಗೆದ್ದಿದ್ದ ಎಂಎಸ್ ಧೋನಿ ನಾಯಕತ್ವದ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಕೂಡ ಇದ್ದರು. 2024ರ ಐಸಿಸಿ ಟಿ20 ವಿಶ್ವಕಪ್ ವಿಜೇತ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಿದ್ದರು. ಟಿ20 ವಿಶ್ವಕಪ್ ಗೆದ್ದ ಬಳಿಕ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ಮೂವರು ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಮುಂದುವರಿಯುತ್ತಿದ್ದಾರೆ.
ಇನ್ನು ಶಿಖರ್ ಧವನ್ ಟಿ20 ಕ್ರಿಕೆಟ್‌ನಲ್ಲಿ 9797 ರನ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 2024ರಲ್ಲಿ ಇವರು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.