ದುಬೈ: ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಒಂದೊರ ಮೇಲೊಂದರಂತೆ ದಾಖಲೆಗಳನ್ನು ಬರೆಯುತ್ತಾರೆ. ಅಂತೆಯೇ ಪಾಕಿಸ್ತಾನ ವಿರುದ್ಧದ ಪಂದ್ಯದ ನಡುವೆಯೂ ಒಂದು ದಾಖಲೆ ಮಾಡಿದ್ದಾರೆ. ಈ ಬಾರಿ ಅವರು ದಾಖಲೆಗಳ ಸರದಾರರಾಗಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೇ ಮುರಿದಿದ್ದಾರೆ.
ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ 15 ರನ್ ಗಳಿಸುತ್ತಿದ್ದಂತೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 14 ಸಾವಿರ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಹೆಸರಿನಲ್ಲಿತ್ತು.
ಸಚಿನ್ ತೆಂಡೂಲ್ಕರ್ 350 ಇನಿಂಗ್ಸ್‌ನಲ್ಲಿ ಈ ಬೃಹತ್ ಸಾಧನೆ ಮಾಡಿದ್ದರು. ಇದೀಗ ಕೊಹ್ಲಿ ಕೇವಲ 287 ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ದಾಟಿದ್ದಾರೆ. . ಶ್ರೀಲಂಕಾದ ಕುಮಾರ ಸಂಗಕ್ಕಾರ (378 ಇನಿಂಗ್ಸ್) ಮೂರನೇ ಸ್ಥಾನದಲ್ಲಿದ್ದಾರೆ. ಅತ್ಯಧಿಕ ಏಕದಿನ ರನ್ ದಾಖಲೆ ಸಚಿನ್(18426) ಹೆಸರಿನಲ್ಲಿದೆ. ಈ ವಿಷಯಕ್ಕೆ ಬಂದಾಗ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಅತಿ ವೇಗವಾಗಿ ಏಕದಿನದಲ್ಲಿ 14 ಸಾವಿರ ರನ್ ಬಾರಿಸಿದವರು
ವಿರಾಟ್ ಕೊಹ್ಲಿ-287 ಇನಿಂಗ್ಸ್
ಸಚಿನ್ ತೆಂಡೂಲ್ಕರ್-350 ಇನಿಂಗ್ಸ್
ಕುಮಾರ ಸಂಗಕ್ಕರ-378 ಇನಿಂಗ್ಸ್
ಕ್ಯಾಚ್ನಲ್ಲಿಯೂ ಕೊಹ್ಲಿ ಕಿಂಗ್
ಕೊಹ್ಲಿ ಪಾಕಿಸ್ತಾನದ ಬ್ಯಾಟರ್ ನಸೀಮ್ ಶಾ ಅವರ ಕ್ಯಾಚ್ ಪಡೆಯುತ್ತಿದ್ದಂತೆ, ವಿಕೆಟ್ ಕೀಪರ್ ಹೊರತುಪಡಿಸಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಕ್ಯಾಚ್ ಪಡೆದ ಮೊದಲ ಭಾರತೀಯ ಹಾಗೂ ವಿಶ್ವದ ಮೂರನೇ ಫೀಲ್ಡರ್ ಎನಿಸಿಕೊಂಡರು. ಇದೇ ವೇಳೆ ಮಾಜಿ ನಾಯಕ ಹಾಗೂ ಆಟಗಾರ ಮೊಹಮ್ಮದ್ ಅಜರುದ್ದೀನ್(156) ದಾಖಲೆ ಪತನಗೊಂಡಿತು.
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮೂರು ಕ್ಯಾಚ್ ಹಿಡಿದಿದ್ದ ವಿರಾಟ್ ಕೊಹ್ಲಿ, ಅಜರುದ್ದೀನ್ ದಾಖಲೆ ಸರಿಗಟ್ಟಿದ್ದರು. ಇದೀಗ ಪಾಕ್ ವಿರುದ್ಧ ಒಟ್ಟು 2 ಕ್ಯಾಚ್ ಪಡೆದು ಅಜರುದ್ದೀನ್ ಅವರನ್ನು ಹಿಂದಿಕ್ಕಿದ್ದಾರೆ. ಸದ್ಯ ಕೊಹ್ಲಿ 158* ಕ್ಯಾಚ್ ಹಿಡಿದಿದ್ದಾರೆ. ವಿಶ್ವ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ ಹೆಸರಿನಲ್ಲಿದೆ. ಅವರು 218 ಕ್ಯಾಚ್ ಹಿಡಿದಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಆಸೀಸ್‌ನ ರಿಕಿ ಪಾಂಟಿಂಗ್(160) ಕಾಣಿಸಿಕೊಂಡಿದ್ದಾರೆ. ಪಾಂಟಿಂಗ್ ದಾಖಲೆ ಮುರಿಯಲು ಕೊಹ್ಲಿಗೆ ಮೂರು ಕ್ಯಾಚ್‌ಗಳ ಅಗತ್ಯವಿದೆ.
ಏಕದಿನದಲ್ಲಿ ಅತ್ಯಧಿಕ ಕ್ಯಾಚ್ ಹಿಡಿದವರು
ಮಹೇಲಾ ಜಯವರ್ಧನೆ-448 ಪಂದ್ಯ, 218 ಕ್ಯಾಚ್
ರಿಕಿ ಪಾಂಟಿಂಗ್- 375 ಪಂದ್ಯ, 160 ಕ್ಯಾಚ್
ವಿರಾಟ್ ಕೊಹ್ಲಿ- 299 ಪಂದ್ಯ, 158* ಕ್ಯಾಚ್
ಮೊಹಮ್ಮದ್ ಅಜರುದ್ದೀನ್- 334 ಪಂದ್ಯ, 156 ಕ್ಯಾಚ್
ರಾಸ್ ಟೇಲರ್- 236 ಪಂದ್ಯ,142 ಕ್ಯಾಚ್