ನವದೆಹಲಿ: ಕೇಂದ್ರ ಗುತ್ತಿಯಲ್ಲಿ ಇರಬೇಕಾದರೆ ರಣಜಿ ಟ್ರೋಫಿ ಸೇರಿದಂತೆ ದೇಶಿಯ ಕ್ರಿಕೆಟ್‌ನಲ್ಲಿ ಆಡಲೇಬೇಕು ಎಂಬ ಬಿಸಿಸಿಐ ನಿಯಮದಿಂದ ಪಾರಾಗಲು ವಿರಾಟ್ ಕೊಹ್ಲಿ (Virat kohli) ಯತ್ನಿಸುತ್ತಿದ್ದಾರೆ. ತಾನು ರಣಜಿಯಲ್ಲಿ ಆಡಲು ಇಷ್ಟಪಡುವುದಿಲ್ಲ ಎಂಬುದಾಗಿ ಕೊಹ್ಲಿ ಬಿಸಿಸಿಐಗೆ ಹೇಳಿದ್ದಾರೆ ಎಂಬುದಾಗಿ ವರದಿಯಾಗಿದೆ. ಈ ಸಾಲಿಗೆ ಕೆ. ಎಲ್ ರಾಹುಲ್ (KL Rahul) ಕೂಡ ಸೇರಿಕೊಂಡಿದ್ದಾರೆ.
ಗಾಯದ ಸಮಸ್ಯೆ ಎದುರಿಸುತ್ತಿದ್ದು, ಅದೇ ಕಾರಣದಿಂದ ತಾವು, ಜನವರಿ 23ರಿಂದ ಆರಂಭವಾಗುವ ಎರಡನೇ ಸುತ್ತಿನ ರಣಜಿ ಟೂರ್ನಿಯಲ್ಲಿ ತಮ್ಮ ರಾಜ್ಯ ತಂಡಗಳ ಪರ ಅಡಲು ಸಾಧ್ಯವಾಗುತ್ತಿಲ್ಲ ಎಂದು ಈ ಇಬ್ಬರು ಆಟಗಾರರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವೈದ್ಯಕೀಯ ತಂಡಕ್ಕೆ ಮಾಹಿತಿ ನೀಡಿದ್ದಾರೆ ಎಂದು ‘ಇಎಸ್‌ಪಿಎನ್‌ಕ್ರಿಕ್‌ಇನ್ಫೊ ತಾಣ ವರದಿ ಮಾಡಿದೆ.
ವಿರಾಟ್ ಕೊಹ್ಲಿ ದೆಹಲಿ ತಂಡದಲ್ಲಿ ಆಡಬೇಕು ಹಾಗೂ ರಾಹುಲ್ ಕರ್ನಾಟಕವನ್ನು ಪ್ರತಿನಿಧಿಸಬೇಕಾಗಿದೆ.
ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಅಟಗಾರ, ಗುತ್ತಿಗೆ ಹಾಗೂ ರಾಷ್ಟ್ರೀಯ ತಂಡದ ಆಯ್ಕೆ ಪಟ್ಟಿಯಲ್ಲಿ ಉಳಿಯಬೇಕಾದರೆ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ರಾಜ್ಯ ತಂಡಗಳ ಪರ ಆಡುವುದನ್ನು ಬಿಸಿಸಿಐ ಇತ್ತೀಚೆಗೆ ಕಡ್ಡಾಯಗೊಳಿಸಿದೆ. ತಪ್ಪಿದಲ್ಲಿ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದೆ. ಜತೆಗೆ 10 ಅಂಶಗಳ ನಿಯಮವನ್ನೂ ಬಿಡುಗಡೆ ಮಾಡಿತ್ತು.
ಯಾವುದೇ ಆಟಗಾರನಿಗೆ ದೇಶೀಯ ಕ್ರಿಕೆಟ್‌ನಲ್ಲಿ ಆಡಲು ಸಾಧ್ಯವಾಗದಿದ್ದರೆ, ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅನುಮತಿ ಪಡೆಯಬೇಕಿದೆ ಎಂದು ಸೂಚನೆಯಲ್ಲಿದೆ. ಅದರಂತೆ ಕೊಹ್ಲಿ ಮತ್ತು ರಾಹುಲ್ ವೈದ್ಯಕೀಯ ತಂಡವನ್ನು ಸಂಪರ್ಕಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಕೊಹ್ಲಿಗೆ ಗಾಯ
ಮಾಹಿತಿ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ನಡೆದ ಬಾರ್ಡರ್–ಗವಾಸ್ಕರ್ ಟೆಸ್ಟ್ ಸರಣಿ ವೇಳೆ ವಿರಾಟ್ ಕೊಹ್ಲಿ ಗಾಯಗೊಂಡಿದ್ದಾರೆ. ಸಿಡ್ನಿಯಲ್ಲಿ ನಡೆದ ಐದನೇ ಮತ್ತು ಅಂತಿಮ ಪಂದ್ಯದ ಸಂದರ್ಭ ಅವರಿಗೆ ಕುತ್ತಿಗೆ ನೋವು ಕಾಣಿಸಿಕೊಂಡಿತ್ತು. ಸರಣಿ ಮುಗಿದ ನಂತರ, ಅವರು ಚಿಕಿತ್ಸೆಗೊಳಗಾಗಿದ್ದರು ಎನ್ನಲಾಗಿದೆ.
ನೋವು ಸಂಪೂರ್ಣ ಶಮನವಾಗಿಲ್ಲ ಎಂದು ಮಂಡಳಿಯ ವೈದ್ಯಕೀಯ ತಂಡಕ್ಕೆ ಕೊಹ್ಲಿ ಮಾಹಿತಿ ನೀಡಿದ್ದಾರೆ. ರಾಹುಲ್ ಅವರ ಮೊಣಕೈಗೆ ಗಾಯವಾಗಿದೆ ಎಂದು ವರದಿಯಾಗಿದೆ.
ದೆಹಲಿ ತಂಡವು, ರಣಜಿ ಟೂರ್ನಿಯ ಎರಡನೇ ಸುತ್ತಿನ ತನ್ನ ಮೊದಲ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಹಾಗೂ ಕರ್ನಾಟಕ ತಂಡವು ಪಂಜಾಬ್ ವಿರುದ್ಧ ಕಣಕ್ಕಿಳಿಯಲಿದೆ.