ಬೆಂಗಳೂರು : ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಅಮೀರ್ ಐಪಿಎಲ್ನಲ್ಲಿ ಆಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಆರ್ಸಿಬಿಯಲ್ಲಿ ಆಡಬೇಕು ಎಂದಿದ್ದಾರೆ. 2026ನೇ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವ ಅವಕಾಶ ತಮ್ಮ ಮುಂದಿದ್ದು. ಅವಕಾಶ ದೊರೆತರೆ ಆಡಲು ಸಿದ್ಧ ಎಂದು ಹೇಳಿದ್ದಾರೆ.
“ಮುಂದಿನ ವರ್ಷಕ್ಕೆ ನನಗೆ ಐಪಿಎಲ್ ಆಡಲು ಅವಕಾಶ ಬರಲಿದೆ. ಅವಕಾಶ ದೊರೆತರೆ ಏಕೆ ಆಡಬಾರದು? ನಾನು ಐಪಿಎಲ್ ನಲ್ಲಿ ಆಡಲು ಸಿದ್ಧನಿದ್ದೇನೆ” ಎಂದು ಅಮೀರ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಅಮೀರ್ ಅವರ ಪತ್ನಿ ನರ್ಜಿಸ್, ಬ್ರಿಟನ್ ಪ್ರಜೆ ಆಗಿದ್ದು, ಅಮೀರ್ ತಮ್ಮ ಯುಕೆ ಪಾಸ್‌ಪೋರ್ಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದು ಅವರಿಗಾಗಿ ಐಪಿಎಲ್ ಅವಕಾಶ ಸೃಷ್ಟಿಯಾಗಲಿದೆ. ಪಾಕಿಸ್ತಾನ ಹೊರತುಪಡಿಸಿ ಉಳಿದೆಲ್ಲ ದೇಶಗಳ ಆಟಗಾರರಿಗೆ ಐಪಿಎಲ್ನಲ್ಲಿ ಆಡುವ ಅವಕಾಶವಿದೆ.
ನಿರೂಪಕರೊಬ್ಬರು “ಐಪಿಎಲ್ ಆಡಲು ಹೋದರೆ ಪಾಕಿಸ್ತಾನದಲ್ಲಿ ನಿಮ್ಮ ವಿರುದ್ಧ ಟೀಕೆಗಳು ನಡೆಯುತ್ತವೆ. ನೀವು ಅದಕ್ಕೆ ಏನು ಪ್ರತಿಕ್ರಿಯೆ ನೀಡುತ್ತೀರಿ?” ಎಂದು ಕೇಳಿದಾಗ, ಅಮೀರ್ , “ಪಾಕಿಸ್ತಾನ ಕ್ರಿಕೆಟಿಗರನ್ನು ಐಪಿಎಲ್‌ಗೆ ನಿಷೇಧಿಸಲಾಗಿತ್ತು. ನಮ್ಮ ಮಾಜಿ ಕ್ರಿಕೆಟಿಗರು ಕಾಮೆಂಟ್ರಿ ಮಾಡುತ್ತಿದ್ದರು ಮತ್ತು ಕೆಲವು ಫ್ರಾಂಚೈಸಿಗಳಿಗೆ ಕೋಚ್ ಆಗಿದ್ದರು” ಎಂದು ಉತ್ತರಿಸಿದರು.
ಅಮೀರ್, ಪಾಕಿಸ್ತಾನದ ಮಾಜಿ ವೇಗಿ ವಸೀಮ್ ಅಕ್ರಂ ಅವರನ್ನು ಗುರಿಯಾಗಿಸಿ ಮಾತನಾಡಿದ್ದಾರೆ. ಅಕ್ರಂ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಅದೇ ರೀತಿ, ಮಾಜಿ ಪಾಕಿಸ್ತಾನ ನಾಯಕ ರಮೀಜ್ ರಾಜಾ ಐಪಿಎಲ್‌ನಲ್ಲಿ ಹಲವು ಬಾರಿ ಕಾಮೆಂಟರಿ ಮಾಡಿದ್ದರು.
ಕೊಹ್ಲಿಯ ಬಗ್ಗೆ ಅಭಿಮಾನ
ಅಮೀರ್ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ. 2016 ಟಿ20 ವಿಶ್ವಕಪ್ ಮುನ್ನ ಕೊಹ್ಲಿ ಬ್ಯಾಟ್ ನೀಡಿದ್ದರು ಎಂದು ಅವರು ಸ್ಮರಿಸಿಕೊಂಡಿದ್ದರು.
“ವಿರಾಟ್ ಅದ್ಭುತ ಆಟಗಾರ ಮತ್ತು ಪ್ರತಿಭೆಯನ್ನು ಗೌರವಿಸುತ್ತಾರೆ. ಅವರು ನನಗೆ ತಮ್ಮ ಬ್ಯಾಟ್ ಕೊಟ್ಟಿದ್ದರು. ಇದು ನನಗೆ ಭಾವನಾತ್ಮಕ ಕ್ಷಣ. ನಾನು ಯಾವಾಗಲೂ ಅವರ ಅಭಿಮಾನಿಯಾಗಿದ್ದೇನೆ. ಅವರು ನನ್ನ ಬೌಲಿಂಗ್ ಅಭಿಮಾನಿ,” ಎಂದು ಅಮೀರ್ ಹೇಳಿದರು.
ಆರ್ಸಿಬಿಯೇ ಇಷ್ಟದ ತಂಡ
ಈ ಶೋನ ಮತ್ತೊಬ್ಬ ಅತಿಥಿ ಅಹ್ಮದ್ ಶಹಜಾದ್, ಆರ್ಸಿಬಿಯ ಬೌಲಿಂಗ್ ದೌರ್ಬಲ್ಯಕ್ಕೆ ಪರಿಹಾರ ನೀಡಲು ಅಮೀರ್ ಸೂಕ್ತ ಆಟಗಾರ ಎಂದು ಅಭಿಪ್ರಾಯಪಟ್ಟರು.
“ಆರ್ಸಿಬಿ ಅಮೀರ್ ಅವರಂಥ ಬೌಲರ್ ಬೇಕು. ಅವರ ಬ್ಯಾಟಿಂಗ್ ವಿಭಾಗ ಚೆನ್ನಾಗಿದೆ. ಬೌಲಿಂಗ್ ಆ ತಂಡದ ಸಮಸ್ಯೆ, ಅಮೀರ್ ಆರ್ಸಿಬಿ ಸೇರಿದರೆ, ಐಪಿಎಲ್ ಟ್ರೋಫಿ ಗೆಲ್ಲುತ್ತಾರೆ” ಎಂದು ಶಹಜಾದ್ ಹೇಳಿದರು.