ನವದೆಹಲಿ : ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಮಂಗಳವಾರ ಬೆಳಿಗ್ಗೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಿದ್ದಾರೆ.
ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ಕೊಹ್ಲಿ, ಇದೀಗ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಇಬ್ಬರು ಮಕ್ಕಳೊಂದಿಗೆ ಲಂಡನ್‌ನಲ್ಲಿ ನೆಲೆಸಿದ್ದಾರೆ. RCB ಪರ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ ಜೂನ್‌ನಲ್ಲಿ ದೇಶವನ್ನು ತೊರೆದ ನಾಲ್ಕು ತಿಂಗಳ ನಂತರ ಇದೀಗ ಕೊಹ್ಲಿ ಭಾರತಕ್ಕೆ ಮರಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಕೊಹ್ಲಿ ದೆಹಲಿ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದನ್ನು ಕಾಣಬಹುದು. ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಇಟ್ಟ ಬೇಡಿಕೆಯನ್ನು ತಿರಸ್ಕರಿಸಿದ ಕೊಹ್ಲಿ, ತಮ್ಮ ಕಾರನ್ನು ಹತ್ತಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ವೈಟ್-ಬಾಲ್ ಸರಣಿಯ ಮೊದಲ ಏಕದಿನ ಪಂದ್ಯ ಅಕ್ಟೋಬರ್ 19ರಿಂದ ಪರ್ತ್‌ನಲ್ಲಿ ಆರಂಭವಾಗಲಿದೆ. ಈ ಸರಣಿ ಮೂಲಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮತ್ತೆ ಭಾರತದ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದ್ದಾರೆ.
2024ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ನಂತರ ಇಬ್ಬರೂ ಆಟಗಾರರು ಟಿ20ಯಿಂದ ನಿವೃತ್ತಿ ಘೋಷಿಸಿದ್ದರು. ಆ ಬಳಿಕ ದಿಗ್ಗಜರು ತಮ್ಮ ಟೆಸ್ಟ್ ವೃತ್ತಿಜೀವನಕ್ಕೂ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು.