ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಆಹಾರ ಮತ್ತು ಆಶ್ರಯ ನೀಡಿದ್ದ ವ್ಯಕ್ತಿಯೊಬ್ಬ ಭದ್ರತಾಪಡೆಗಳ ಕೈಗೆ ಸಿಗುವ ಭಯದಿಂದ ನದಿಯೊಂದಕ್ಕೆ ಹಾರಿರುವ ಘಟನೆ ನಡೆದಿದೆ. ರಭಸವಾಗಿ ಹರಿಯುತ್ತಿರುವ ನದಿಯ ನೀರಿನಲ್ಲಿ ಆತ ಕೊಚ್ಚಿ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video) ಆಗಿದೆ.
ಅರಣ್ಯ ಪ್ರದೇಶದಲ್ಲಿ ಓಡುತ್ತಾ ಸಾಗಿದ ಇಮ್ತಿಯಾಜ್ ಅಹ್ಮದ್ ಮಗ್ರಾಯ್ (23) ಏಕಾಏಕಿ ನದಿಗೆ ಹಾರುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ.
ಶನಿವಾರವಷ್ಟೇ ಇಮ್ತಿಯಾಜ್ ಅಹ್ಮದ್ ಮಗ್ರಾಯ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಆತ ಕುಲ್ಗಾಮ್‌ನ ತಾಂಗ್‌ಮಾರ್ಗ್‌ನ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಭಯೋತ್ಪಾದಕರಿಗೆ ಆಹಾರ ಮತ್ತು ಇತರೆ ಅಗತ್ಯ ಸಾಮಗ್ರಿಗಳನ್ನು ಪೂರೈಸಿರುವುದಾಗಿ ಬಾಯಿಬಿಟ್ಟಿದ್ದ. ನಂತರ ಉಗ್ರರ ಅಡಗುತಾಣಕ್ಕೆ ಭದ್ರತಾ ಪಡೆ ಸಿಬ್ಬಂದಿಯನ್ನು ಕರೆದೊಯ್ಯುವುದಾಗಿಯೂ ತಿಳಿಸಿದ್ದ. ಅದರಂತೆ, ಭಾನುವಾರ ಮುಂಜಾನೆ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸೇನೆಯ ಜಂಟಿ ತಂಡವು ಮಗ್ರಾಯ್‌ನನ್ನು ಕರೆದುಕೊಂಡು ಅರಣ್ಯದತ್ತ ಹೊರಟಿತ್ತು. ಆದರೆ, ಮಾರ್ಗಮಧ್ಯೆ ಆತ ಭದ್ರತಾಪಡೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಏಕಾಏಕಿ ವೇಶಾವ್ ನದಿಗೆ ಹಾರಿದ ಎಂದು ಮೂಲಗಳು ತಿಳಿಸಿವೆ.
ಆತ ಎಸ್ಕೇಪ್ ಆಗುತ್ತಿರುವ ಕ್ಷಣದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆತ ನದಿಗೆ ಹಾರುವ ಸಮಯದಲ್ಲಿ ಆತನ ಜೊತೆ ಬೇರೆ ಯಾರೂ ಇರಲಿಲ್ಲ ಎನ್ನಲಾಗಿದೆ. ನದಿಗೆ ಬಿದ್ದೊಡನೆ ಆತ ಈಜಲು ಪ್ರಯತ್ನಿಸಿದನಾದರೂ, ನೀರಿನ ರಭಸ ತೀವ್ರವಾಗಿದ್ದ ಕಾರಣ, ಆತ ಕೊಚ್ಚಿಹೋಗಿ, ಕೊನೆಗೆ ಮುಳುಗಿ ಮೃತಪಟ್ಟ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಘಟನೆ ಬಗ್ಗೆ ತಪ್ಪು ಮಾಹಿತಿ ಹಬ್ಬಿಸುವವರ ಕೃತ್ಯವನ್ನು ಭದ್ರತಾ ಪಡೆಗಳು ಖಂಡಿಸಿವೆ. ಯುವಕನ ದುರದೃಷ್ಟಕರ ಸಾವಿಗೆ ಭದ್ರತಾ ಪಡೆಗಳು ಕಾರಣ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಪಡೆಗಳು ಈ ರೀತಿ ಹೇಳಿವೆ.
ಇಮ್ತಿಯಾಜ್ ಅಹ್ಮದ್ ಮಗ್ರಾಯ್ ಸಾವಿನ ಹಿಂದೆ ಸಂಚು ಅಡಗಿದೆ ಎಂದು ಪಿಡಿಪಿ ನಾಯಕಿ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪಿಸಿದ್ದರು.
ಕುಲ್ಗಾಂನ ನದಿಯಲ್ಲಿ ಮತ್ತೊಬ್ಬ ಯುವಕನ ಮೃತದೇಹ ಪತ್ತೆಯಾಗಿದೆ. ಇದು ಯಾವುದೋ ಸಂಚಿನ ಬಗ್ಗೆ ಗಂಭೀರ ಅನುಮಾನ ಮೂಡಿಸುತ್ತಿದೆ. ಎರಡು ದಿನಗಳ ಹಿಂದೆ ಸೇನೆಯವರು ಇಮ್ತಿಯಾಜ್‌ನನ್ನು ಮನೆಯಿಂದ ಕರೆದೊಯ್ದಿದ್ದರು. ಈಗ ಆತನ ದೇಹ ಅನುಮಾನಾಸ್ಪದವಾಗಿ ನದಿಯಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ಮೆಹಬೂಬಾ ಅವರು ಟ್ವೀಟ್ ಮಾಡಿದ್ದರು.