ಕೊಡಗು: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಗೋಣಿಮರೂರು ಗ್ರಾಮದ ನಿವಾಸಿ, ಬಿಜೆಪಿ ಕಾರ್ಯಕರ್ತರೂ ಆಗಿರುವ ವಿನಯ್ ಸೋಮಯ್ಯ (Vinay Somaiah) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೊಡಗು ಕಾಂಗ್ರೆಸ್ ಶಾಸಕ ಎ.ಎಸ್. ಪೊನ್ನಣ್ಣ, ಮಂಥರ್ ಗೌಡ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ತನ್ನೀರಾ ಮೈನಾ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ನನ್ನ ಸಹೋದರ ವಿನಯ್ ಸೋಮಯ್ಯ ಅವರಿಗೆ ಮೂವರು ಕಿರುಕುಳನೀಡಿದ್ದಾರೆ. ಇವರ ಮೂವರ ಕಿರುಕುಳದಿಂದ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ವಿನಯ್ ಸೋಮಯ್ಯ ಅವರ ಸಹೋದರ ಜೀವನ್ ಸೋಮಯ್ಯ ದೂರು ನೀಡಿದ್ದಾರೆ. ಇದಾದ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ, ವಿನಯ್ ಸೋಮಯ್ಯ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.
ವಿನಯ್ ಸೋಮಯ್ಯ ಅವರು ‘ಕೊಡಗಿನ ಸಮಸ್ಯೆಗಳು ಮತ್ತು ಸಲಹೆ ಸೂಚನೆಗಳು’ ಎಂಬ ಹೆಸರಿನ ವಾಟ್ಸ್ ಆ್ಯಪ್ ಗ್ರೂಪ್ ಅಡ್ಮಿನ್ ಆಗಿದ್ದರು. ಇತ್ತೀಚೆಗೆ ಇದೇ ಗ್ರೂಪ್ ಮೂಲಕ ಕೊಡಗು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರ ಆಕ್ಷೇಪಾರ್ಹ ಫೋಸ್ಟ್ ವೈರಲ್ ಆಗಿತ್ತು. ಈ ಸಂಬಂಧ ಅಡ್ಮಿನ್ ಆಗಿದ್ದ ವಿನಯ್ ವಿರುದ್ಧವೇ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು.
ಇದೇ ಪ್ರಕರಣದಲ್ಲಿ ವಿನಯ್ ಸೋಮಯ್ಯ ಅವರನ್ನು ಎರಡು ತಿಂಗಳ ಹಿಂದೆ ಬಂಧಿಸಲಾಗಿತ್ತು. ಬಂಧನದ ಬಳಿಕ ಬಹಳ ಮನನೊಂದಿದ್ದ ವಿನಯ್ ಆತ್ಮಹತ್ಯೆಗೆ ಶರಣಾಗಿದ್ದರು. ಅವರು ಹಲವು ಮುಖಂಡರ ವಿರುದ್ಧ ಆರೋಪ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದ್ದಾರೆ.