ಚಿಕ್ಕಬಳ್ಳಾಪುರ: ಕಲುಷಿತ ನೀರು ಸೇವಿಸಿ ಗ್ರಾಮಸ್ಥರು ವಾಂತಿ- ಭೇದಿ ಸೇರಿದಂತೆ ಅನಾರೋಗ್ಯಕ್ಕೆ ಬಲಿಯಾಗುತ್ತಿರುವ ಘಟನೆ ತಾಲೂಕಿನ ಚಿಕ್ಕಪೈಯಲಗುರ್ಕಿ ಹಾಗೂ ಎಚ್.ಕುರುಬರಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೇ, ವೃದ್ಧರೊಬ್ಬರು ಬಲಿಯಾಗಿದ್ದಾರೆ ಎನ್ನಲಾಗಿದೆ.
ಗ್ರಾಮಕ್ಕೆ ಪೂರೈಕೆಯಾಗುತ್ತಿರುವ ಕಲುಷಿತ (Contaminated water) ನೀರಿನಿಂದ ಈ ಘಟನೆ ನಡೆದಿದೆ ಎಂದು ಜನ ಆರೋಪಿಸುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ (Health Department) ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದು ಜಿಲ್ಲಾಡಳಿತ ಅಲರ್ಟ್ ಆಗಿದೆ.
ಈ ಎರಡು ಗ್ರಾಮಗಳಿಗೆ ದೊಡ್ಡಪೈಲಗುರ್ಕಿ ಗ್ರಾಮ ಪಂಚಾಯತಿ ಕುಡಿಯುವ ನೀರು ಸರಬರಾಜು ಮಾಡುತ್ತಿದೆ. ಆ ನೀರನ್ನು ಕುಡಿಯುತ್ತಿದ್ದ ಅವಳಿ ಗ್ರಾಮಸ್ಥರಲ್ಲಿ ಕಳೆದ ಒಂದು ವಾರದಿಂದ ವಾಂತಿ ಭೇದಿ ಮೈ-ಕೈ ನೋವು ಕಾಣಿಸಿಕೊಂಡಿದೆ. ಗ್ರಾಮದ 40ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಪೈಕಿ ಓರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್.ಕುರುಬರಹಳ್ಳಿ ನಿವಾಸಿ 67 ವರ್ಷದ ವೃದ್ಧ ಸಿದ್ದಪ್ಪ ಮೃತಪಟ್ಟಿದ್ದು, ಸಾವಿಗೆ ಕಲುಷಿತ ನೀರೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.