ಉಡುಪಿ : ಜನರ ಮೇಲೆ ಜಿ.ಎಸ್.ಟಿ ಹೊರೆ ಹೋರಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಸಾಧನೆಯಾದರೆ ಜನಸಾಮಾನ್ಯರಿಗೆ ಹೊರೆಯಾಗಿದ್ದ ಜಿ.ಎಸ್.ಟಿ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿ, ಹೋರಾಟ ಮಾಡಿ ಇವತ್ತು ಜಿ.ಎಸ್.ಟಿ ಹೊರೆ ಕಡಿಯಾಗಲು ಕಾರಣ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ.
ಪತ್ರಿಕಾ ಹೇಳಿಕೆಯನ್ನು ನೀಡಿದ ವಿಕಾಸ್, ಕೇಂದ್ರ ಸರ್ಕಾರ ಅವೈಜ್ಞಾನಿಕ ಹಾಗೂ ಅಸಮರ್ಪಕ ಜಿ.ಎಸ್.ಟಿಯನ್ನು 2016 ರಲ್ಲಿ ಜಾರಿಗೆ ತಂದಾಗ ಅಂದೇ ರಾಹುಲ್ ಗಾಂಧಿ ಇದನ್ನು ವಿರೋಧಿಸಿದ್ದರು ಹಾಗೂ ನಾಲ್ಕು ಶ್ರೇಣಿಯಲ್ಲಿರುವ ಜಿ.ಎಸ್.ಟಿಯನ್ನು ಎರಡು ಶ್ರೇಣಿಗೆ ಮಿತಿಗೊಳಿಸಲು ಆಗೃಹ ಮಾಡಿದ್ದರು ಹಾಗೂ ಜಿ.ಎಸ್.ಟಿ ಗರಿಷ್ಠ ಮಿತಿಯನ್ನು ಶೇ.18ಕ್ಕೆ ನಿಗದಿಗೊಳಿಸುವಂತೆ ಸಲಹೆ ನೀಡಿದ್ದರು, ಆದರೆ ಕೇಂದ್ರ ಸರ್ಕಾರ ಇಷ್ಟು ವರ್ಷಗಳ ಕಾಲ ಸುಮಾರು ಶೇ.28ರ ತನಕ ನಾಲ್ಕು ಶ್ರೇಣಿಯಲ್ಲಿ ಜಿ.ಎಸ್.ಟಿಯನ್ನು ಜನಸಾಮಾನ್ಯರ ಮೇಲೆ ಹೇರಿ, ತೆರಿಗೆ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ಅನಗತ್ಯ ಹೊರೆ ಹೋರಿಸಿ ಅದೆಷ್ಟೋ ಉದ್ಯಮ ಹಾಗೂ ಉದ್ಯೋಗಿಗಳನ್ನು ಬೀದಿಗೆ ತಂದು ಈಗ ಜಿ.ಎಸ್.ಟಿ ಶ್ರೇಣಿಯನ್ನು ಎರಡು ಹಂತಕ್ಕೆ ಮಿತಿಗೊಳಿಸಿ ಶೇ.18 ಜಿ.ಎಸ್.ಟಿಗೆ ಸ್ಥಿಮಿತಗೊಳಿಸಿರುವುದು ದೊಡ್ಡ ಸಾಧನೆ ಎನ್ನುವ ರೀತಿ ಪ್ರಚಾರ ಮಾಡುತ್ತಿರುವುದು ಅವರ ರಾಜಕೀಯ ದಿವಾಳಿತನದ ಪರಮಾವಧಿಯಾಗಿದೆ, ಇವತ್ತು ಕೇಂದ್ರ ಸರ್ಕಾರ ಅಸಮರ್ಪಕ ಜಿ.ಎಸ್.ಟಿಯ ಶ್ರೇಣಿ ಹಾಗೂ ಮಿತಿಯನ್ನು ಕಡಿಮೆ ಮಾಡಲು ಕಾರಣ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ನಿರಂತರ “ಅವೈಜ್ಞಾನಿಕ ಹಾಗೂ ಅಸಮರ್ಪಕ ಜಿ.ಎಸ್.ಟಿ” ವಿರುದ್ಧದ ಹೋರಾಟ ಎಂದಿದ್ದಾರೆ.
ಜಿ.ಎಸ್.ಟಿ ಎನ್ನುವ ಭೂತವನ್ನು ಮುಂದಿಟ್ಟು ಜನರಿಂದ ಸುಲಿಗೆ ಮಾಡಿದ ಕೇಂದ್ರ ಸರ್ಕಾರ ಜಿ.ಎಸ್.ಟಿ ಇಳಿಕೆ ತನ್ನ ಸಾಧನೆ ಎನ್ನುವ ಬದಲು ಇಷ್ಟು ವರ್ಷಗಳ ಕಾಲ ಜನರಿಗೆ ಜಿ.ಎಸ್.ಟಿ ಹೆಸರಿನಲ್ಲಿ ಅನಗತ್ಯ ಕಿರುಕುಳ ಹಾಗೂ ಆರ್ಥಿಕ ಹೊರೆ ನೀಡಿದ್ದಕ್ಕೆ ದೇಶದ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.