ಬೆಳಗಾವಿ : ಬಿಜೆಪಿಯಲ್ಲಿ ಬಣ ರಾಜಕೀಯ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಹೈಕಮಾಂಡ್ ನಾಯಕರ ಮಧ್ಯ ಪ್ರವೇಶದಿಂದ ಸದ್ಯಕ್ಕೆ ಅದು ಶಾಂತವಾಗಿದ್ದರೂ ಒಳ ವೈಮನಸ್ಸು ಮಾತ್ರ ಮುಂದುವರೆದಿದೆ.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಯತ್ನಾಳ್ ಹಾಗೂ ವಿಜಯೇಂದ್ರ ಮುಖಾಮುಖಿ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಸಭೆಗೆ ಗೈರಾದ ಯತ್ನಾಳ್, ವಿಜಯೇಂದ್ರರಿಂದ ಅಂತರ ಕಾಯ್ದುಕೊಂಡಿದ್ದರು. ಇದೀಗ ಬೆಳಗಾವಿ ಅಧಿವೇಶನದದ (Belagavi Session) ಸಂದರ್ಭದಲ್ಲಿ ವಿಜಯೇಂದ್ರ ಹಾಗೂ ಯತ್ನಾಳ್ ಪರಸ್ಪರ ದೂರ..ದೂರವೇ ಎನ್ನುವಂತೆ ಕಂಡು ಬಂದಿದ್ದಾರೆ.
ವಿಪಕ್ಷ ನಾಯಕ ಆರ್. ಅಶೋಕ್ ಮೇಲೆ ಯತ್ನಾಳ್ ಸೇರಿದಂತೆ ಬಿಜೆಪಿಯ ರೆಬೆಲ್ ನಾಯಕರು ಸಾಫ್ಟ್ ಆಗಿದ್ದರೆ, ವಿಜಯೇಂದ್ರ ವಿರುದ್ಧ ಮಾತ್ರ ಮುನಿಸು ಮುಂದುವರೆಸಿದ್ದಾರೆ ಎನ್ನಲಾಗಿದೆ. ವಿಧಾನಸಭೆಯ ಲಾಂಜ್ ನಲ್ಲಿ ಎದುರಾದರೂ ವಿಜಯೇಂದ್ರ ಹಾಗೂ ಯತ್ನಾಳ್ ಒಬ್ಬರಿಗೊಬ್ಬರು ಮಾತನಾಡಲಿಲ್ಲ. ವಿಪಕ್ಷ ನಾಯಕ ಆರ್. ಅಶೋಕ್ ಇಲ್ಲದ ಸಮಯದಲ್ಲಿ ಅವರ ಕೊಠಡಿಯಲ್ಲಿ ಹೋಗಿ ಯತ್ನಾಳ್ ಕುಳಿತಿದ್ದರು. ಆಗ ಅಲ್ಲಿಗೆ ಬಂದ ವಿಜಯೇಂದ್ರ ಕಾಫಿ ಕುಡಿಯುತ್ತಿದ್ದರು. ಆಗ ಸಿಟ್ಟಿನಿಂದಲೇ ಯತ್ನಾಳ್ ಹೊರ ನಡೆದಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಿದ ವೇಳೆ ಕೂಡ ರೆಬೆಲ್ ನಾಯಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಯತ್ನಾಳ್, ರಮೇಶ ಜಾರಕಿಹೊಳಿ ಹಾಜರಾಗುವುದಿಲ್ಲ ಎಂದಿದ್ದರು. ಹೀಗಾಗಿ ಬಿಜೆಪಿಯಲ್ಲಿನ ಆಂತರಿಕ ಕಲಹ ಬೂದಿ ಮುಚ್ಚಿದ ಕೆಂಡದಂತಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.