ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(B.Y. Vijayendra) ಹಾಗೂ ಶಾಸಕ ರಮೇಶ ಜಾರಕಿಹೊಳಿ ಮಧ್ಯೆ ದೊಡ್ಡ ಸಂಘರ್ಷ ನಡೆಯುತ್ತಿದೆ. ಯತ್ನಾಳ್ ಬಣದಲ್ಲಿರುವ ರಮೇಶ ಜಾರಕಿಹೊಳಿ(Ramesh Jarakiholi) ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ವೇಳೆ ವಿಜಯೇಂದ್ರ ಬೆಂಬಲಿಗರು ಹೈಕಮಾಂಡ್ ಭೇಟಿ ಮಾಡಿ, ಯತ್ನಾಳ್ ಹಾಗೂ ರಮೇಶ ಜಾರಕಿಹೊಳಿ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿ ಕಾಂಗ್ರೆಸ್ ವ್ಯಂಗ್ಯವಾಡಿದೆ.
“ಹತ್ತಿದ ಏಣಿಯನ್ನು ಒದೆಯುವುದು ಬಿಜೆಪಿ ಪಕ್ಷದ ಹಳೆಯ ಚಾಳಿ. ಆಪರೇಷನ್ ಕಮಲಕ್ಕೆ ಬಲಿಯಾದ ರಮೇಶ್ ಜಾರಕಿಹೊಳಿ ಪರಿಸ್ಥಿತಿ ತಿಂದು ಎಸೆವ ಬಾಳೆ ಎಲೆಯಂತಾಗಿದೆ. ಸ್ವಂತ ಶಕ್ತಿಯಿಂದ ಅಧಿಕಾರದ ಹಿಡಿಯಲು ಸಾಧ್ಯವಾಗದೆ, 2019ರಲ್ಲಿ ಅನೈತಿಕ ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಸಿ ಸಮ್ಮಿಶ್ರ ಸರ್ಕಾರದ 17 ಶಾಸಕರನ್ನು ಸೆಳೆದು ಅಧಿಕಾರ ಅನುಭವಿಸಿದ ಬಿಜೆಪಿ, ಇಂದು ಅದೇ ಶಾಸಕರನ್ನು ಕಾಲಕಸದಂತೆ ಕಾಣುತ್ತಿದೆ..” ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಸರ್ಕಾರ ರಚಿಸಿದ ಸಂದರ್ಭದಲ್ಲಿ 17 ಶಾಸಕರನ್ನು ಬಿಜೆಪಿ ನೋಡಿಕೊಂಡ ರೀತಿಗೂ ಮತ್ತು ಈಗ ಇವರುಗಳನ್ನು ನೋಡಿಕೊಳ್ಳುತ್ತಿರುವ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಆಗ ಈ ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗಿ ಐಷಾರಾಮಿ ಹೋಟೆಲ್‌ನಲ್ಲಿ ಇರಿಸಿದ್ದ ಬಿಜೆಪಿ, ಈಗ ಮಾತೆತ್ತಿದ್ದರೆ ಹುಷಾರ್ ಎಂದು ಬೆದರಿಕೆ ಹಾಕುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಆರೋಪಿಸಿದೆ.