ನವದೆಹಲಿ : ರೀಲ್ಸ್ ಹುಚ್ಚು ಮತ್ತೊಬ್ಬ ಯುವಕನ ಪ್ರಾಣವನ್ನೇ ಬಲಿಪಡೆದಿದೆ. ಪೂರ್ವ ದೆಹಲಿಯ ಡಲ್ಲಾಪುರ (ನ್ಯೂ ಅಶೋಕ್ ನಗರ) ಬಳಿ ಯುವಕನೊಬ್ಬ ತನ್ನ ಸ್ನೇಹಿತನಿಂದ ವಿಡಿಯೋ ಮಾಡಿಸಿಕೊಳ್ಳುತ್ತಿದ್ದಾಗಲೇ ಆಕಸ್ಮಿಕವಾಗಿ ತನ್ನ ಎದೆಗೆ ತಾನೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ಮೃತ ಯುವಕನನ್ನು ಪವನ್ ಎಂದು ಗುರುತಿಸಲಾಗಿದೆ. ಆತನ ಸ್ನೇಹಿತನೇ ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆಹಿಡಿಯುತ್ತಿದ್ದ. ವೈರಲ್ ಆಗಿರುವ ವಿಡಿಯೋದಲ್ಲಿ, ಪವನ್ ಪಿಸ್ತೂಲ್‌ಗೆ ಮ್ಯಾಗಜೀನ್ (ಗುಂಡು) ಲೋಡ್ ಮಾಡುವುದನ್ನು ಕಾಣಬಹುದು. ಈ ವೇಳೆ ವಿಡಿಯೋ ಮಾಡುತ್ತಿದ್ದ ಸ್ನೇಹಿತ, “ಬಟನ್ ಒತ್ತು, ಅದು ಒಳಗೆ ಹೋಗುತ್ತದೆ” ಎಂದು ಸೂಚನೆ ನೀಡುತ್ತಾನೆ. ಮ್ಯಾಗಜೀನ್ ಹಾಕಿದ ಬಳಿಕ ಪವನ್ ಪಿಸ್ತೂಲ್ ಅನ್ನು ಕಾಕ್ (Cock) ಮಾಡಿದ್ದಾನೆ. ಇದನ್ನು ಗಮನಿಸಿದ ಸ್ನೇಹಿತ “ಚಲಾನಾ ಮತ್ ಭಾಯ್ (ಗುಂಡು ಹಾರಿಸಬೇಡ ಅಣ್ಣ)” ಎಂದು ಎಚ್ಚರಿಸಿದ್ದಾನೆ.
ಆದರೆ, ಆಗ ನಗು ಬೀರಿದ ಪವನ್ ಕ್ಯಾಮೆರಾ ಕಡೆ ನೋಡಿ ಪಿಸ್ತೂಲನ್ನು ತನ್ನ ಎದೆಯ ಎಡಭಾಗಕ್ಕೆ ಇಟ್ಟುಕೊಂಡು ಟ್ರಿಗರ್ ಒತ್ತಿದ್ದಾನೆ. ಕ್ಷಣಾರ್ಧದಲ್ಲಿ ಗುಂಡು ಹಾರಿ ಆತ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾನೆ. ಘಟನೆಯಿಂದ ತೀವ್ರ ಗಾಬರಿಗೊಂಡ ಸ್ನೇಹಿತ “ಭಾಯ್, ಕ್ಯಾ ಕರ್ ದಿಯಾ ತೂನೇ? (ಅಣ್ಣಾ, ಏನ್ ಮಾಡ್ಬಿಟ್ಟೆ ನೀನು?)” ಎಂದು ಆಘಾತದಿಂದ ಕಿರುಚುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಲಾಕ್ ಆಗಿದೆ ಎಂಬ ಭ್ರಮೆಯೇ ಮುಳುವಾಯ್ತೇ?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಪವನ್ ಮತ್ತು ಆತನ ಸ್ನೇಹಿತರು ಸೇರಿ ಪಿಸ್ತೂಲ್ ಹಿಡಿದು ಸ್ಟಂಟ್ ಮಾಡುತ್ತಾ ರೀಲ್ಸ್ ಮಾಡಲು ಮುಂದಾಗಿದ್ದರು. ಘಟನೆಯಲ್ಲಿ ಬಳಸಲಾದ ಪಿಸ್ತೂಲ್ ವಿಡಿಯೋ ಮಾಡುತ್ತಿದ್ದ ಅದೇ ಸ್ನೇಹಿತನಿಗೆ ಸೇರಿದ್ದಾಗಿದ್ದು, ಅದು ಪರವಾನಗಿ ಹೊಂದಿದ (Licensed) ಪಿಸ್ತೂಲ್ ಆಗಿದೆ. ಪಿಸ್ತೂಲ್ ‘ಲಾಕ್’ ಆಗಿದೆ ಎಂದು ಪವನ್ ಬಲವಾಗಿ ನಂಬಿದ್ದ. ಆದರೆ ಆಯುಧ ಲಾಕ್ ಆಗಿರಲಿಲ್ಲ. ಹೀಗಾಗಿ ಟ್ರಿಗರ್ ಒತ್ತಿದ ತಕ್ಷಣವೇ ಗುಂಡು ಹಾರಿ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ದಾಖಲಿಸಿದರೂ ಉಳಿಯಲಿಲ್ಲ ಪ್ರಾಣ
ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಪವನ್‌ನನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತನ ಕುಟುಂಬಸ್ಥರು ಆಘಾತದಲ್ಲಿದ್ದು, ಯಾವುದೇ ಪ್ರತಿಕ್ರಿಯೆ ನೀಡಲು ಲಭ್ಯವಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಸುತ್ತಲಿನ ನಿಖರ ಕಾರಣಗಳನ್ನು ಪತ್ತೆಹಚ್ಚಲು ಮತ್ತು ಪರವಾನಗಿ ಹೊಂದಿದ್ದ ಪಿಸ್ತೂಲ್ ಬಳಕೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಉಪನ್ಯಾಸಕರು, ಶಿಕ್ಷಕರು, ಎಸ್‌ಡಿಎ ಹುದ್ದೆಗಳ ನೇಮಕಾತಿ.. ಕೂಡಲೇ ಅರ್ಜಿ ಸಲ್ಲಿಸಿ


















