ಬೆಂಗಳೂರು: ಇಂದಿನಿಂದ ರಾಜ್ಯಕ್ಕೆ ವರುಣ ಎಂಟ್ರಿ ಕೊಡುತ್ತಿದ್ದಾನೆ. ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದ ಮಳೆರಾಯ ಈಗ ಮತ್ತೆ ಅಬ್ಬರಿಸಲು ಮುಂದಾಗಿದ್ದಾನೆ. ಹವಾಮಾನ ಇಲಾಖೆಯ ಮುನ್ಸೂಚನೆ ಕೇಳಿ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ.
ಬಿಸಿಲಿನಿಂದ ಬಸವಳಿದಿದ್ದ ಬೆಂಗಳೂರು ಮಂದಿಗೂ ಮಳೆಯ ಮುನ್ಸೂಚನೆ ನೆಮ್ಮದಿ ನೀಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ 32 ಡಿಗ್ರಿವರೆಗೂ ಗರಿಷ್ಟ ಉಷ್ಣಾಂಶ ಬೆಂಗಳೂರಿನಲ್ಲಿ ದಾಖಲಾಗಿತ್ತು. ಇಂದಿನಿಂದ ಮತ್ತೆ ಮುಂಗಾರು ಚುರುಕಾಗುವ ಸಾಧ್ಯತೆ ಇತ್ತು. ಇಂದಿನಿಂದ ಜೂನ್ 13ರ ವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಜೂನ್ 11,12 ಹಾಗೂ 13ರಂದು ರಾಜ್ಯದ ಬಹುತೇಕ ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಜೂನ್ 11ರಂದು ಬಳ್ಳಾರಿ, ದಾವಣಗೆರೆ ವಿಜಯನಗರಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ 12ಕ್ಕೆ ವಿಜಯನಗರ, ಕೊಡಗು, ದಾವಣಗೆರೆ, ಚಿಕ್ಕಬಳ್ಳಾಪುರ, ಬಳ್ಳಾರಿ, ವಿಜಯಪುರ, ಕಲಬುರಗಿ, ಬೆಳಗಾವಿ, ಬಾಲಕೋಟೆ ಮತ್ತು ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.