ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಮುಗ್ಗರಿಸಿದೆ. ಸೋತರೂ ಭಾರತೀಯ ಬೌಲರ್ ದಾಖಲೆ ಬರೆದಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಬ್ಯಾಟಿಂಗ್ ಕ್ರಮಾಂಕ ಪೆವಿಲಿಯನ್ ಪರೇಡ್ ನಡೆಸಿತ್ತು. ಭಾರತ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 124 ರನ್ ಗಳಿಸಿತ್ತು. ಈ ಸುಲಭ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರತೀಯ ಬೌಲರ್ ವರುಣ್ ಚಕ್ರವರ್ತಿ ಸಿಂಹ ಸ್ವಪ್ನವಾಗಿ ಕಾಡಿದರು. ಹೀಗಾಗಿ ಪಂದ್ಯ ರೋಚಕತೆಯಿಂದ ಕೂಡಿತ್ತು.
ವರುಣ್ ಚಕ್ರವರ್ತಿ ಈ ಪಂದ್ಯದಲ್ಲಿ ಬರೋಬ್ಬರಿ 5 ವಿಕೆಟ್ ಪಡೆದಿದ್ದಾರೆ. ಅದರಲ್ಲೂ ಪ್ರಮುಖ ಬ್ಯಾಟ್ಸಮನ್ ಗಳನ್ನೇ ಬಲಿ ಪಡೆದಿದ್ದು, ದಕ್ಷಿಣ ಆಫ್ರಿಕಾಗೆ ಆಘಾತ ನೀಡುವಂತಾಗಿತ್ತು. ರೀಝ ಹೆಂಡ್ರಿಕ್ಸ್ (24) ಹಾಗೂ ಐಡೆನ್ ಮಾರ್ಕ್ರಾಮ್ (3) ಅವರನ್ನು ಬೌಲ್ಡ್ ಮಾಡಿದ ವರುಣ್ ಚಕ್ರವರ್ತಿ, ಆ ನಂತರ ಮಾರ್ಕೊ ಯಾನ್ಸೆನ್ (7) ಬಲಿ ಪಡೆದರು. ಕೊನೆಗೆ ಹೆನ್ರಿಕ್ ಕ್ಲಾಸೆನ್ (2) ಹಾಗೂ ಡೇವಿಡ್ ಮಿಲ್ಲರ್ (0) ಔಟ್ ಮಾಡಿದರು. ಈ ಮೂಲಕ ನಿಗದಿತ ಓವರ್ ಗಲ್ಲಿಲ 17 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು. ಆದರೂ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 3 ವಿಕೆಟ್ ಗಳ ವಿರೋಚಿತ ಸೋಲು ಕಂಡಿತು. ಆದರೆ, ವರುಣ್ ಚಕ್ರವರ್ತಿ ಮಾತ್ರ ದಾಖಲೆ ಬರೆದರು.
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಸೋತ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್ ಎಂಬ ದಾಖಲೆಯೊಂದು ವರುಣ್ ಚಕ್ರವರ್ತಿ ಪಾಲಾಗಿದೆ. ಇದಕ್ಕೂ ಮುನ್ನ ಮುಸ್ತಫಿಜುರ್ ರೆಹಮಾನ್ ಹೆಸರಿನಲ್ಲಿ ಈ ದಾಖಲೆ ಇತ್ತು. ಬಾಂಗ್ಲಾದೇಶ್ ತಂಡದ ಎಡಗೈ ವೇಗಿ ಮುಸ್ತಫಿಜುರ್ ರೆಹಮಾನ್ 2016 ರಲ್ಲಿ ನ್ಯೂಜಿಲೆಂಡ್ ವಿರುದ್ಧ 22 ರನ್ ನೀಡಿ 5 ವಿಕೆಟ್ ಪಡೆದಿದ್ದರು. ಆದರೂ ಬಾಂಗ್ಲಾದೇಶ ತಂಡ 75 ರನ್ ಗಳಿಂದ ಸೋತಿತ್ತು. ಆದರೆ, ವರುಣ್ 17 ರನ್ ನೀಡಿ 5 ವಿಕೆಟ್ ಪಡೆದು ಅಗ್ರ ಸ್ಥಾನ ಅಲಂಕರಿಸಿದ್ದಾರೆ.