ಲಖನೌ: ಉತ್ತರ ಪ್ರದೇಶದಾದ್ಯಂತ ಎಲ್ಲಾ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಘೋಷಿಸಿದ್ದಾರೆ. ರಾಷ್ಟ್ರೀಯ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವ್ಯಾಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.
ಗೋರಖ್‌ಪುರದಲ್ಲಿ ನಡೆದ ‘ಏಕತಾ ಯಾತ್ರೆ’ ಮತ್ತು ‘ವಂದೇ ಮಾತರಂ’ ಸಾಮೂಹಿಕ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಷ್ಟ್ರದ ಬಗ್ಗೆ ಗೌರವ ಮತ್ತು ಹೆಮ್ಮೆಯ ಭಾವನೆಯನ್ನು ಮೂಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. “ವಂದೇ ಮಾತರಂ ಬಗ್ಗೆ ಎಲ್ಲರಿಗೂ ಗೌರವದ ಭಾವನೆ ಇರಬೇಕು. ನಾವು ಉತ್ತರ ಪ್ರದೇಶದ ಪ್ರತಿಯೊಂದು ಶಾಲೆ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಇದರ ಗಾಯನವನ್ನು ಕಡ್ಡಾಯಗೊಳಿಸುತ್ತೇವೆ,” ಎಂದು ಅವರು ಸಭೆಯನ್ನುದ್ದೇಶಿಸಿ ಹೇಳಿದರು.
ರಾಷ್ಟ್ರಗೀತೆಯ 150ನೇ ವರ್ಷಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದೆಹಲಿಯಲ್ಲಿ ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳನ್ನು ಉದ್ಘಾಟಿಸಿದ್ದರು. ಈ ಆಚರಣೆಯು ನವೆಂಬರ್ 7, 2025 ರಿಂದ ನವೆಂಬರ್ 7, 2026 ರವರೆಗೆ ನಡೆಯಲಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿ ನೀಡಿದ ಮತ್ತು ರಾಷ್ಟ್ರೀಯ ಹೆಮ್ಮೆ ಹಾಗೂ ಏಕತೆಯ ಸಂಕೇತವಾಗಿರುವ ಈ ಐತಿಹಾಸಿಕ ಗೀತೆಯ 150ನೇ ವರ್ಷವನ್ನು ಈ ಮೂಲಕ ಸ್ಮರಿಸಲು ನಿರ್ಧರಿಸಲಾಗಿದೆ.
‘ವಂದೇ ಮಾತರಂ’ ಗೀತೆಯನ್ನು ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು ನವೆಂಬರ್ 7, 1875 ರಂದು ಅಕ್ಷಯ ನವಮಿಯ ದಿನದಂದು ರಚಿಸಿದ್ದರು. ಈ ಗೀತೆಯು ಮೊದಲು ಅವರ ‘ಆನಂದಮಠ’ ಕಾದಂಬರಿಯ ಭಾಗವಾಗಿ ‘ಬಂಗದರ್ಶನ’ ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, “ವಂದೇ ಮಾತರಂ ತಲೆಮಾರುಗಳಿಗೆ ಸ್ಫೂರ್ತಿ ನೀಡಿದ ಭಾರತದ ಏಕತೆಯ ನಿಜವಾದ ಸಂಕೇತವಾಗಿದೆ. ಇದರ 150ನೇ ವರ್ಷಾಚರಣೆಯು ನಮಗೆ ಹೊಸ ಸ್ಫೂರ್ತಿಯನ್ನು ನೀಡುತ್ತದೆ ಮತ್ತು ದೇಶದ ಜನರಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ,” ಎಂದು ಹೇಳಿದ್ದರು.
ಇದನ್ನೂ ಓದಿ: ಬಿಬಿಸಿ ಮುಖ್ಯಸ್ಥರ ರಾಜೀನಾಮೆ: ‘ಟ್ರಂಪ್ ಸಾಕ್ಷ್ಯಚಿತ್ರ’ದ ಹಿಂದಿನ ವಿವಾದವೇನು?


















