ವಿಲೋಮೋರ್ ಪಾರ್ಕ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತದ ಅಂಡರ್-19 ತಂಡವು ಸತತ ಎರಡನೇ ಜಯ ದಾಖಲಿಸುವ ಮೂಲಕ ಯೂತ್ ಏಕದಿನ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ತಂಡದ ನಾಯಕ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಈ ಗೆಲುವಿನ ಹರಿಕಾರನಾಗಿ ಹೊರಹೊಮ್ಮಿದೆ.
ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ಕೇವಲ 24 ಎಸೆತಗಳನ್ನು ಎದುರಿಸಿದ ನಾಯಕ ವೈಭವ್ ಸೂರ್ಯವಂಶಿ, ಅಕ್ಷರಶಃ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದರು. ಅವರು ಕೇವಲ 24 ಎಸೆತಗಳಲ್ಲಿ 68 ರನ್ ಚಚ್ಚಿದರು. ಈ ಇನಿಂಗ್ಸ್‌ನಲ್ಲಿ ಬರೋಬ್ಬರಿ 10 ಭರ್ಜರಿ ಸಿಕ್ಸರ್ ಹಾಗೂ 1 ಬೌಂಡರಿ ಸೇರಿತ್ತು.
ರಿಷಭ್ ಪಂತ್ ದಾಖಲೆ ಮಿಸ್
ವೈಭವ್ ತಮ್ಮ ಅರ್ಧಶತಕವನ್ನು ಕೇವಲ 19 ಎಸೆತಗಳಲ್ಲಿ ಪೂರೈಸಿದರು. ಈ ಮೂಲಕ ಭಾರತದ ಪರ ಯೂತ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ಫಿಫ್ಟಿ ಸಿಡಿಸಿದ ರಿಷಭ್ ಪಂತ್ (18 ಎಸೆತ) ಅವರ ದಾಖಲೆಯನ್ನು ಮುರಿಯುವ ಸುವರ್ಣಾವಕಾಶವನ್ನು ಕೇವಲ ಒಂದು ಎಸೆತದ ಅಂತರದಿಂದ ಕಳೆದುಕೊಂಡರು. ಆದಾಗ್ಯೂ, ವಿಶ್ವಮಟ್ಟದಲ್ಲಿ ಅಜ್ಮತುಲ್ಲಾ ಒಮರ್ಜಾಯ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಜಂಟಿ ಮೂರನೇ ಅತಿ ವೇಗದ ಅರ್ಧಶತಕದ ಸಾಧನೆ ಮಾಡಿದರು.
ಪಂದ್ಯದ ಗತಿ ಬದಲಿಸಿದ ಮಳೆ
ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ, ಜೇಸನ್ ರೋಲ್ಸ್ ಅವರ ಆಕರ್ಷಕ ಶತಕದ (114 ರನ್) ನೆರವಿನಿಂದ 49.3 ಓವರ್‌ಗಳಲ್ಲಿ 245 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ, ಪಂದ್ಯಕ್ಕೆ ಮಳೆ ಮತ್ತು ಮಿಂಚಿನ ಅಡ್ಡಿಯಾದ ಕಾರಣ ಡಕ್ವರ್ತ್ ಲೂಯಿಸ್ (DLS) ನಿಯಮದಂತೆ ಭಾರತಕ್ಕೆ 27 ಓವರ್‌ಗಳಲ್ಲಿ 174 ರನ್‌ಗಳ ಪರಿಷ್ಕೃತ ಗುರಿ ನೀಡಲಾಗಿತ್ತು. ಭಾರತ 23.3 ಓವರ್‌ಗಳಲ್ಲಿ 176/2 ರನ್ ಗಳಿಸಿದ್ದಾಗ ಪಂದ್ಯವನ್ನು ಸ್ಥಗಿತಗೊಳಿಸಿ, ಭಾರತ 8 ವಿಕೆಟ್‌ಗಳ ಜಯ ಸಾಧಿಸಿದೆ ಎಂದು ಘೋಷಿಸಲಾಯಿತು.
ಬೌಲಿಂಗ್‌ನಲ್ಲಿ ಕಿಶನ್ ಸಿಂಗ್ ಮಿಂಚು
ಭಾರತದ ಪರ ಬೌಲಿಂಗ್‌ನಲ್ಲಿ ಕಿಶನ್ ಸಿಂಗ್ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು 8.3 ಓವರ್‌ಗಳಲ್ಲಿ 46 ರನ್ ನೀಡಿ 4 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ ಗಳಿಸದಂತೆ ತಡೆದರು. ಅವರಿಗೆ ಸಾಥ್ ನೀಡಿದ ಆರ್.ಎಸ್. ಅಂಬರೀಶ್ 2 ವಿಕೆಟ್ ಪಡೆದರು.
ಸರಣಿ ವಶ:
ಮೂರು ಪಂದ್ಯಗಳ ಈ ಸರಣಿಯಲ್ಲಿ ಭಾರತ ಈಗ 2-0 ಅಂತರದ ಅಜೇಯ ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲೂ ಭಾರತ ಡಿಎಲ್‌ಎಸ್ ನಿಯಮದಂತೆ ಗೆಲುವು ಸಾಧಿಸಿತ್ತು. ಸರಣಿಯ ಅಂತಿಮ ಪಂದ್ಯವು ಜನವರಿ 7, ಬುಧವಾರದಂದು ಇದೇ ಮೈದಾನದಲ್ಲಿ ನಡೆಯಲಿದೆ.
ಯೂತ್ ಏಕದಿನ ಕ್ರಿಕೆಟ್‌ನ ಅತಿ ವೇಗದ ಅರ್ಧಶತಕಗಳು:
- ಸ್ಟೀವ್ ಸ್ಟೋಕ್: 13 ಎಸೆತ (ದಕ್ಷಿಣ ಆಫ್ರಿಕಾ)
- ರಿಷಭ್ ಪಂತ್: 18 ಎಸೆತ (ಭಾರತ)
- ಅಜ್ಮತುಲ್ಲಾ ಒಮರ್ಜಾಯ್: 19 ಎಸೆತ (ಅಫ್ಘಾನಿಸ್ತಾನ)
- ವೈಭವ್ ಸೂರ್ಯವಂಶಿ: 19 ಎಸೆತ (ಭಾರತ – ಜನವರಿ 5, 2026)
ಇದನ್ನೂ ಓದಿ: SA20 ಲೀಗ್‌ನಲ್ಲಿ ಹೊಸ ದಾಖಲೆ | ಕೇಶವ್ ಮಹಾರಾಜ್ ಓವರ್‌ನಲ್ಲಿ 34 ರನ್ ಚಚ್ಚಿದ ಜಾನಿ ಬೈರ್‌ಸ್ಟೋ



















