ಬುಲವಾಯೊ: ಜಿಂಬಾಬ್ವೆಯ ಬುಲವಾಯೊದಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ಬರೆದಿದ್ದಾರೆ. ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ, ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಫಿಫ್ಟಿ ಬಾರಿಸಿದ ‘ಅತ್ಯಂತ ಕಿರಿಯ ಆಟಗಾರ’ ಎಂಬ ವಿಶ್ವದಾಖಲೆಗೆ ವೈಭವ್ ಪಾತ್ರರಾಗಿದ್ದಾರೆ.
15 ವರ್ಷ ತುಂಬುವ ಮುನ್ನವೇ ವಿಶ್ವದಾಖಲೆ
ಎಡಗೈ ಬ್ಯಾಟರ್ ಆಗಿರುವ ವೈಭವ್ ಅವರ ವಯಸ್ಸು ಕೇವಲ 14 ವರ್ಷ ಮತ್ತು 296 ದಿನಗಳು. ಬಾಂಗ್ಲಾದೇಶದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಅವರು ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ 15 ವರ್ಷ ತುಂಬುವ ಮುನ್ನವೇ ವಿಶ್ವಕಪ್ ವೇದಿಕೆಯಲ್ಲಿ ಅರ್ಧಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಆರಂಭಿಕ ಆಘಾತದಿಂದ ತಂಡಕ್ಕೆ ಚೇತರಿಕೆ
ಮೊದಲು ಬ್ಯಾಟಿಂಗ್‌ಗೆ ಇಳಿದ ಟೀಮ್ ಇಂಡಿಯಾ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ನಾಯಕ ಆಯುಷ್ ಮ್ಹಾತ್ರೆ (6) ಮತ್ತು ವೇದಾಂತ್ ತ್ರಿವೇದಿ (0) ಅವರನ್ನು ಕಳೆದುಕೊಂಡಾಗ ತಂಡದ ಮೊತ್ತ ಕೇವಲ 12 ರನ್ ಆಗಿತ್ತು. ಈ ಒತ್ತಡದ ಸನ್ನಿವೇಶದಲ್ಲಿ ಪ್ರಬುದ್ಧ ಆಟ ಪ್ರದರ್ಶಿಸಿದ ವೈಭವ್, 67 ಎಸೆತಗಳಲ್ಲಿ 72 ರನ್ (6 ಬೌಂಡರಿ, 3 ಸಿಕ್ಸರ್) ಬಾರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಅಲ್ಲದೆ, ಅಭಿಜ್ಞಾನ್ ಕುಂದು ಅವರೊಂದಿಗೆ 4ನೇ ವಿಕೆಟ್‌ಗೆ 62 ರನ್‌ಗಳ ಅಮೂಲ್ಯ ಜೊತೆಯಾಟವಾಡಿದರು.
ವಿರಾಟ್ ಕೊಹ್ಲಿ ದಾಖಲೆ ಮುರಿದ ಪಟು
ಈ ಇನ್ನಿಂಗ್ಸ್ ಮೂಲಕ ವೈಭವ್ ಸೂರ್ಯವಂಶಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಯೂತ್ ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ದಿಗ್ಗಜ ವಿರಾಟ್ ಕೊಹ್ಲಿ ಅವರ ರನ್ ಗಳಿಕೆಯ ವೇಗವನ್ನು ವೈಭವ್ ಹಿಂದಿಕ್ಕಿದ್ದಾರೆ. ಯೂತ್ ಒಡಿಐಗಳಲ್ಲಿ ವೇಗವಾಗಿ 1000 ರನ್ ಪೂರೈಸುವ ಮೂಲಕ ವೈಭವ್ ಈ ಸಾಧನೆ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಅವರು ಅಂಡರ್-19 ಹಂತದಲ್ಲಿ 25 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರೆ, ವೈಭವ್ ಕೇವಲ 19 ಇನ್ನಿಂಗ್ಸ್‌ಗಳಲ್ಲಿ 1045 ರನ್ ಕಲೆಹಾಕುವ ಮೂಲಕ ಭವಿಷ್ಯದ ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸದ್ಯ ಅವರು ಯೂತ್ ಒಡಿಐಗಳಲ್ಲಿ 3 ಶತಕ ಹಾಗೂ 4 ಅರ್ಧಶತಕಗಳನ್ನು ಹೊಂದಿದ್ದಾರೆ.
ಯುಎಸ್‌ಎ ವಿರುದ್ಧದ ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ (2 ರನ್) ವೈಭವ್, ದ್ವಿತೀಯ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ.
ಇದನ್ನೂ ಓದಿ: ಅರ್ಶ್‌ದೀಪ್‌ಗೆ ಸಲ್ಲಬೇಕಾದ ಗೌರವ ನೀಡಿ, ಅವರನ್ನು ತಲೆ ಎತ್ತಿ ನಡೆಯಲು ಬಿಡಿ | ಅಶ್ವಿನ್ ಗರಂ



















