ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, 10 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಲ್ಲದೇ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಪರಿಹಾರ ಘೋಷಿಸಿದ್ದಾರೆ. ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂ. ಪರಿಹಾರ ಘೋಷಿಸಿದ್ದರು.
ಇದಾದ ಬೆನ್ನಲ್ಲೇ ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಪರಿಹಾರ (2 Lakh Condolence) ಘೋಷಿಸಿದೆ. ಈ ಕುರಿತು ಟ್ವೀಟ್ ಮೂಲಕ ಪೋಸ್ಟ್ ಮಾಡಿ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿಯಿಂದ ತೀವ್ರ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ.
ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ. ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಹಾಯ ಮಾಡುತ್ತಿದೆ. ಪಿಎಂಎನ್‌ಆರ್‌ಎಫ್‌ನಿಂದ 2 ಲಕ್ಷ ರೂಪಾಯಿ ಮೃತರ ಕುಟುಂಬಸ್ಥರಿಗೆ ಮತ್ತು ಈ ದುರಂತದ ಗಾಯಾಳುಗಳಿಗೆ 50 ಸಾವಿರ ರೂ. ನೀಡುವುದಾಗಿ ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತಾಪ ಸೂಚಿಸಿದ್ದಾರೆ.