ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡ ಉತ್ತರ ಪ್ರದೇಶ ತಂಡವನ್ನು ಕೇವಲ 89 ರನ್ ಗಳಿಗೆ ಕಟ್ಟಿ ಹಾಕಿದೆ.
ಕರ್ನಾಟಕದ ಭರವಸೆಯ ಬೌಲರ್ ವಾಸುಕಿ ಕೌಶಿಕ್ ಅವರ ಮಾರಕ ದಾಳಿಗೆ ಉತ್ತರ ಪ್ರದೇಶ ತಂಡ ನಲುಗಿ ಹೋಗಿದೆ. ಪರಿಣಾಮ ಕೇವಲ 89 ರನ್ ಗಳಿಗೆ ಆಲೌಟ್ ಆಗಿದೆ. ವಾಸೂಕಿ ಕೌಶಿಕ್ 20 ರನ್ ನೀಡಿ ಪ್ರಮುಖ ಐದು ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಟಾಸ್ ಗೆದ್ದ ಉತ್ತರ ಪ್ರದೇಶ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಓಪನರ್ ಅಭಿಷೇಕ್ ಗೋಸ್ವಾಮಿ, ಮೇಧವಾ ಕೌಶಿಕ್ ಬೇಗನೆ ಔಟ್ ಆದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಿತುರಾಜ್ ಶರ್ಮಾ 12 ರನ್ ಗಳಿಸಿದರು.
ನಾಯಕ ಆರ್ಯನ್ ಜುಯಲ್, ಆದಿತ್ಯ ಶರ್ಮಾ, ವಿಪ್ರಜ್ ಎನ್ ರನ್ ಕಲೆ ಹಾಕುವಲ್ಲಿ ಎಡವಿದರು. ಸಮೀರ್ ರಿಜ್ವಿ ಸಮಯೋಚಿತ ಹೋರಾಟಕ್ಕೆ ಮುಂದಾದರು. ಅವರು 59 ಎಸೆತಗಳಲ್ಲಿ 25 ರನ್ ಸಿಡಿಸಿದರು. ಕೃತಗ್ಯ ಸಿಂಗ್ (13) ಹಾಗೂ ಸೌರಭ್ ಕುಮಾರ್ (13)ರನ್ ಸಿಡಿಸಿದರು. ಆನಂತರ ಪಟಪಟನೇ ವಿಕೆಟ್ ಉರುಳಿದವು.
ಈ ಪಂದ್ಯದಲ್ಲಿ ವೇಗದ ಬೌಲರ್ ಗಳು ಸ್ಥಿರ ಪ್ರದ್ಶನ ನೀಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ತತ್ತರಿಸಿ ಹೋಯಿತು. ವಾಸುಕಿ ಕೌಶಿಕ್ 16 ಓವರ್ ಬೌಲ್ ಮಾಡಿ 20 ರನ್ ನೀಡಿ 5 ವಿಕೆಟ್ ಕಬಳಿಸಿದರು. ವಿದ್ಯಾಧರ್ ಪಾಟೀಲ್ 2 ವಿಕೆಟ್ ಪಡೆದರು. ಯಶೋವರ್ಧನ್ ಪ್ರತಾಪ್ ಹಾಗೂ ಮೋಶ್ಸಿನ್ ಖಾನ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಮಾಡಿ ಕರ್ನಾಟಕದ ಬ್ಯಾಟ್ಸಮನ್ ಗಳು ಕೂಡ ಉತ್ತಮ ರನ್ ಗಳಿಸಲು ವಿಫಲರಾದರು. ಕರ್ನಾಟಕ ತಂಡ ಕೂಡ 5 ವಿಕೆಟ್ ಕಳೆದುಕೊಂಡು ನಾಳೆಯ ಆಟ ಕಾಯ್ದುಕೊಂಡಿದೆ.