ಬೆಂಗಳೂರು: ಹಲವರು ತಮ್ಮ ವಾಹನಗಳಿಗೆ ಬೇಕಾಬಿಟ್ಟಿಯಾಗಿ ಲೈಟ್ ಅಳವಡಿಸಿಕೊಂಡು ಚಲಾಯಿಸುತ್ತಿರುವುದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಪ್ರಸಂಗಗಳು ಆಗಾಗ ನಡೆಯುತ್ತಲೇ ಇದ್ದವು. ಸದ್ಯ ಇಂತಹ ಘಟನೆಗಳನ್ನು ಪತ್ತೆ ಹಚ್ಚಿ ಪೊಲೀಸರು ದಂಡ ವಿಧಿಸಿದ್ದಾರೆ.
ಹೈ ಬೀಮ್ ಲೈಟ್ ಉಪಯೋಗಿಸುತ್ತಿದ್ದ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ನಾಟಕದಾದ್ಯಂತ ಈ ವಾರ ಅಂದರೆ ಜುಲೈ 01ರಿಂದ ಜುಲೈ 7ರ ವರೆಗೆ 8244 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ರಾತ್ರಿ ವೇಳೆ ಹೈ ಬೀಮ್ ಲೈಟ್ ಉಪಯೋಗದಿಂದ ಅಪಘಾತ (Accidents) ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು, ಹೀಗೆ ಹಾಕಿಕೊಂಡು ಚಲಾಯಿಸಿದವರ ವಿರುದ್ಧ ಕೇಸ್ ಹಾಕಿದ್ದಾರೆ. ಈ ಮೂಲಕ ಹೈ ಬೀಮ್ ಎಲ್ ಇಡಿ ಹೆಡ್ ಲೈಟ್ ಹೊಂದಿರುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ಮೊದಲ ರಾಜ್ಯ ಕರ್ನಾಟಕ ಆಗಿದೆ.
ಕಾರು, ಬೈಕ್ ಹಾಗೂ ಇತರ ವಾಹನಗಳಲ್ಲಿ ಕಣ್ಣುಕುಕ್ಕುವಂಥ ಎಲ್ಇಡಿ ಲೈಟ್ಗಳನ್ನು ಅಳವಡಿಸಿ ಇತರರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಜುಲೈನಿಂದ ಕಾರ್ಯಾಚರಣೆ ರಂಭಿಸುವುದಾಗಿ ಪೊಲೀಸರು ಹೇಳಿದ್ದಾರೆ. ಹೀಗಾಗಿ ಕೇವಲ ಒಂದೇ ವಾರದಲ್ಲಿ (ಏಳು ದಿನ) ಎಲ್ಲಾ ಜಿಲ್ಲೆಗಳಲ್ಲಿ ಸೇರಿಸಿದಂತೆ ಕರ್ನಾಟಕದಲ್ಲಿ ಒಟ್ಟು 8244 ಪ್ರಕರಣಗಳು ದಾಖಲಾಗಿವೆ.
ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಅಲೋಕ್ ಕುಮಾರ್ ಈ ಕುರಿತು ಮಾಹಿತಿ ನೀಡಿ, ಕ್ರಮ ಕೈಗೊಂಡ ಅಧಿಕಾರಿಗಳಿಗೆ, ಸಿಬ್ಬಂದಿಗೆ ಅಲೋಕ್ ಕುಮಾರ್ ಅವರು ಎಕ್ಸ್ನಲ್ಲಿ ಶ್ಲಾಘಿಸಿದ್ದಾರೆ.
ತೀಕ್ಷ್ಣ ಬೆಳಕು ಸೂಸುವಂಥ ಎಲ್ ಇಡಿ ಲೈಟ್ ಗಳನ್ನು ಅಳವಡಿಸಿದ ಅತಿಹೆಚ್ಚು ಪ್ರಕರಣಗಳು ಬೆಂಗಳೂರಿನ ನಗರ ಜಿಲ್ಲೆಯಲ್ಲಿಯೇ ಹೆಚ್ಚಾಗಿ ವರದಿಯಾಗಿವೆ. ನಗರದಲ್ಲಿ ಏಳು ದಿನಗಳಲ್ಲಿ ಅಂದರೆ ಜುಲೈ 01 ರಿಂದ ಜುಲೈ 7ರ ವರೆಗೆ ಬರೋಬ್ಬರಿ 3354 ಕೇಸ್ ದಾಖಲಾಗಿವೆ. ನಂತರದ ಸ್ಥಾನಗಳಲ್ಲಿ ರಾಯಚೂರು (386, ಮೈಸೂರು ನಗರ (381), ಮಂಗಳೂರು ನಗರ (325) ಇವೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಈ ಪ್ರಕರಣ ದಾಖಲಾಗಿವೆ. ಹೀಗಾಗಿ ಇಂತಹ ಲೈಟ್ ಅಳವಡಿಸಿಕೊಂಡಿರುವ ಚಾಲಕರಿಗೆ, ಮಾಲೀಕರಿಗೆ ಸಂಕಷ್ಟ ಶುರುವಾಗಿದೆ.