ವಾಷಿಂಗ್ಟನ್: ಅಮೆರಿಕ-ಇರಾನ್ ಯುದ್ಧ ತಾರಕಕ್ಕೇರಿದ್ದು, ಇರಾನ್‌ನ ಪ್ರಮುಖ ತೈಲ ಕೇಂದ್ರವಾಗಿರುವ ‘ಖಾರ್ಗ್ ದ್ವೀಪ’ದ (Kharg Island) ಮೇಲಿನ ಸೇನಾ ನೆಲೆಗಳ ಮೇಲೆ ಅಮೆರಿಕ ಭೀಕರ ಬಾಂಬ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಇರಾನ್‌ನ ಸೇನಾ ನೆಲೆಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಲ್ಲದೆ, ಜಾಗತಿಕ ತೈಲ ಪೂರೈಕೆಗೆ ನಿರ್ಣಾಯಕವಾಗಿರುವ ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ವಾಣಿಜ್ಯ ಮತ್ತು ತೈಲ ಹಡಗುಗಳಿಗೆ ಅಮೆರಿಕ ನೌಕಾಪಡೆಯು ಶೀಘ್ರದಲ್ಲೇ ಭದ್ರತೆ ಒದಗಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇರಾನ್‌ನ ಶೇಕಡಾ 90ರಷ್ಟು ಕಚ್ಚಾ ತೈಲ ರಫ್ತು ನಿರ್ವಹಿಸುವ ಈ ಖಾರ್ಗ್ ದ್ವೀಪವನ್ನು ಇರಾನ್‌ನ ಆರ್ಥಿಕತೆಯ ‘ಕ್ರೌನ್ ಜ್ಯುವೆಲ್’ ಎಂದೇ ಪರಿಗಣಿಸಲಾಗಿದೆ. ತಮ್ಮ ‘ಟ್ರುತ್ ಸೋಶಿಯಲ್’ (Truth Social) ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಟ್ರಂಪ್, ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಅತ್ಯಂತ ಪ್ರಬಲವಾದ ಬಾಂಬ್ ದಾಳಿಯ ಮೂಲಕ ಸೇನಾ ಗುರಿಗಳನ್ನು ನಾಶಪಡಿಸಲಾಗಿದೆ ಎಂದಿದ್ದಾರೆ. ಸದ್ಯಕ್ಕೆ ಮಾನವೀಯತೆಯ ದೃಷ್ಟಿಯಿಂದ ದ್ವೀಪದ ತೈಲ ಮೂಲಸೌಕರ್ಯಗಳನ್ನು ಗುರಿಯಾಗಿಸಿಲ್ಲ. ಆದರೆ, ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮುಕ್ತ ಮತ್ತು ಸುರಕ್ಷಿತ ಸಂಚಾರಕ್ಕೆ ಇರಾನ್ ಅಥವಾ ಬೇರೆ ಯಾರಾದರೂ ಅಡ್ಡಿಪಡಿಸಿದರೆ, ಈ ನಿರ್ಧಾರವನ್ನು ಕ್ಷಣಮಾತ್ರದಲ್ಲಿ ಮರುಪರಿಶೀಲಿಸುವುದಾಗಿ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ದಾಳಿಯನ್ನು ಎದುರಿಸುವ ಅಥವಾ ಜಗತ್ತಿಗೆ ಬೆದರಿಕೆ ಒಡ್ಡುವ ಯಾವುದೇ ಸಾಮರ್ಥ್ಯ ಇನ್ನು ಮುಂದೆ ಇರಾನ್‌ಗೆ ಉಳಿದಿಲ್ಲ ಎಂದು ಟ್ರಂಪ್ ಗುಡುಗಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ
ಯುದ್ಧದ ಪರಿಣಾಮವಾಗಿ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ಕಚ್ಚಾ ತೈಲದ ಬೆಲೆಗಳು ಗಗನಕ್ಕೇರಿದ್ದು, ಬ್ರೆಂಟ್ ಕಚ್ಚಾ ತೈಲದ ದರ ಶೇ.42ರಷ್ಟು ಜಿಗಿದು ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿವೆ. ಇದು ಜಗತ್ತಿನಾದ್ಯಂತ ಹಣದುಬ್ಬರ ಮತ್ತು ಇಂಧನ ಪೂರೈಕೆಯ ಆತಂಕವನ್ನು ಹೆಚ್ಚಿಸಿದೆ. ಇರಾನ್‌ನ ಸತತ ದಾಳಿಗಳಿಂದಾಗಿ, ಜಾಗತಿಕ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ (LNG) ಐದನೇ ಒಂದು ಭಾಗ ಹಾದುಹೋಗುವ ಹೊರ್ಮುಜ್ ಜಲಸಂಧಿಯಲ್ಲಿ ಕಡಲ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಈ ಬಿಕ್ಕಟ್ಟನ್ನು ಶಮನಗೊಳಿಸಲು ಅಮೆರಿಕದ ನೌಕಾಪಡೆಯು ಶೀಘ್ರದಲ್ಲೇ ತೈಲ ಟ್ಯಾಂಕರ್‌ಗಳಿಗೆ ಬೆಂಗಾವಲಾಗಿ ನಿಲ್ಲಲಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.
ಲೆಬನಾನ್‌ನಲ್ಲಿ ಉಲ್ಬಣಗೊಂಡ ಸಂಘರ್ಷ
ಅಮೆರಿಕದ ಬಾಂಬ್ ದಾಳಿ ತೀವ್ರಗೊಳ್ಳುತ್ತಿದ್ದಂತೆಯೇ, ವಿಚಲಿತಗೊಂಡಿರುವ ಇರಾನ್, ಇಸ್ರೇಲ್ ಹಾಗೂ ತನ್ನ ಕೊಲ್ಲಿ ನೆರೆಹೊರೆಯ ರಾಷ್ಟ್ರಗಳಾದ ಕತಾರ್ ಮತ್ತು ಸೌದಿ ಅರೇಬಿಯಾದತ್ತ ಹೊಸ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ಆರಂಭಿಸಿದೆ. ಈ ಕ್ಷಿಪಣಿಗಳನ್ನು ಮಿತ್ರಪಡೆಗಳು ಮತ್ತು ನ್ಯಾಟೋ ಪಡೆಗಳು ಮಾರ್ಗಮಧ್ಯೆ ಹೊಡೆದುರುಳಿಸಿವೆ. ಇನ್ನೊಂದೆಡೆ, ಇಸ್ರೇಲ್ ಮತ್ತು ಲೆಬನಾನ್‌ನ ಹೆಜ್ಬೊಲ್ಲಾ ನಡುವಿನ ಯುದ್ಧವೂ ಭೀಕರ ಸ್ವರೂಪ ಪಡೆದುಕೊಂಡಿದೆ. ದಕ್ಷಿಣ ಲೆಬನಾನ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 12 ವೈದ್ಯಕೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಹೆಜ್ಬೊಲ್ಲಾವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಇಸ್ರೇಲ್ ನಡೆಸುತ್ತಿರುವ ಸರಣಿ ದಾಳಿಗಳಿಗೆ ಲೆಬನಾನ್‌ನಲ್ಲಿ ಈವರೆಗೆ 773 ಜನರು ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಖಮೇನಿ ಪುತ್ರನ ಬಗ್ಗೆ ಮಾಹಿತಿಗೆ 10 ಮಿಲಿಯನ್ ಡಾಲರ್ ಬಹುಮಾನ
ಕಳೆದ ಎರಡು ವಾರಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್‌ನ 15,000 ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ನಡೆಸಿವೆ ಎಂದು ಪೆಂಟಗನ್ ತಿಳಿಸಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಅಮೆರಿಕವು ಜಪಾನ್ ಮೂಲದ ‘ಯುಎಸ್‌ಎಸ್ ಟ್ರಿಪೋಲಿ’ ಯುದ್ಧನೌಕೆಯ ಜೊತೆಗೆ 2,500 ನೌಕಾಪಡೆಯ ಯೋಧರನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿದೆ. ಫೆ.28 ರಂದು ಇಸ್ರೇಲ್-ಅಮೆರಿಕದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆಯಾದ ಬಳಿಕ, ಅವರ ಪುತ್ರ ಮೊಜ್ತಬಾ ಖಮೇನಿಯನ್ನು ಹೊಸ ನಾಯಕನನ್ನಾಗಿ ಹೆಸರಿಸಲಾಗಿತ್ತು. ಆದರೆ, ಅವರು ಗಾಯಗೊಂಡಿದ್ದು ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಮೊಜ್ತಬಾ ಎಲ್ಲಿದ್ದಾರೆಂಬ ಬಗ್ಗೆ ಮಾಹಿತಿ ನೀಡಿದವರಿಗೆ ಅಮೆರಿಕ ಸರ್ಕಾರ 10 ಮಿಲಿಯನ್ ಡಾಲರ್ ಬಹುಮಾನವನ್ನೂ ಘೋಷಿಸಿದೆ.
ಇದನ್ನೂ ಓದಿ : ಇಂದಿರಾ ಕ್ಯಾಟೀನ್‌ಗೆ ಗ್ಯಾಸ್ ಪೂರೈಕೆ ಮಾಡಲು ಗ್ರೀನ್ ಸಿಗ್ನಲ್



















