ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅವರು ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ಆಕ್ರಮಣಕಾರಿ ನಿರ್ಧಾರಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ದಾಖಲೆ ಇಲ್ಲದೆ ನೆಲೆಸಿರುವ ವಲಸಿಗರ ಗಡೀಪಾರು, ಜನ್ಮಜಾತವಾಗಿ ಲಭಿಸುವ ಪೌರತ್ವ ಹಕ್ಕು ರದ್ದು, ಬೇರೆ ದೇಶಗಳ ವಿರುದ್ಧ ಆಮದು ಸುಂಕದ ಸಮರ ಸೇರಿ ಹಲವು ನಿರ್ಧಾರ ತೆಗೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ, ಡೊನಾಲ್ಡ್ ಟ್ರಂಪ್ (Donald Trump) ಅವರೀಗ ಭಾರತದ ವಿರುದ್ಧವೂ ಸುಂಕದ ಸಮರ (US Tariffs) ಸಾರಿದ್ದಾರೆ.
“ನಮಗೆ ಹೆಚ್ಚು ತೆರಿಗೆ ವಿಧಿಸುವ ದೇಶಗಳಿಗೆ ನಾವು ಕೂಡ ಪ್ರತಿಯಾಗಿ ಆಮದು ಸುಂಕ ಹೆಚ್ಚಿಸುತ್ತೇವೆ. ಭಾರತ ಸೇರಿ ಹಲವು ದೇಶಗಳು ದಶಕಗಳಿಂದ ಅಮೆರಿಕಕ್ಕೆ ಹೆಚ್ಚು ಸುಂಕ ವಿಧಿಸಿವೆ. ನ್ಯಾಯಸಮ್ಮತವಲ್ಲದ ವ್ಯಾಪಾರದ ನೀತಿ ಅನುಸರಿಸಿವೆ. ಹಾಗಾಗಿ, ಭಾರತ ಸೇರಿ ಹಲವು ರಾಷ್ಟ್ರಗಳಿಗೆ ನಾವು ಕೂಡ ಹೆಚ್ಚಿನ ಸುಂಕ (Reciprocal Tariffs) ವಿಧಿಸುತ್ತೇವೆ. ಏಪ್ರಿಲ್ 2ರಿಂದಲೇ ನೂತನ ಸುಂಕ ಜಾರಿಗೆ ಬರಲಿದೆ” ಎಂದು ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಈಗಾಗಲೇ ಹಲವು ದೇಶಗಳಿಗೆ ಹೆಚ್ಚಿನ ಸುಂಕ ವಿಧಿಸಿದ್ದಾರೆ. ಕೆನಡಾ ಹಾಗೂ ಮೆಕ್ಸಿಕೋಗೆ ಶೇ.25ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದರೆ, ಚೀನಾಗೆ ಶೇ.10ರಷ್ಟು ಹೆಚ್ಚುವರಿ ಸುಂಕದ ಬರೆ ಬಿದ್ದಿದೆ. ಇದನ್ನೇ ಬೇರೆ ದೇಶಗಳಿಗೂ ಟ್ರಂಪ್ ವಿಸ್ತರಿಸಿದ್ದಾರೆ. “ಅಮೆರಿಕನ್ನರಿಗೆ ಹೆಚ್ಚು ಸುಂಕ ವಿಧಿಸುವುದನ್ನು ನಾವು ಸಹಿಸುವುದಿಲ್ಲ. ಐರೋಪ್ಯ ಒಕ್ಕೂಟ, ಚೀನಾ, ಬ್ರೆಜಿಲ್, ಭಾರತ ಸೇರಿ ಹಲವು ದೇಶಗಳು ನಮಗೆ ಹೆಚ್ಚಿನ ಸುಂಕ ವಿಧಿಸಿರುವುದು ಸರಿಯಲ್ಲ” ಎಂದು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಭಾರತವು ನಮಗೆ ಶೇ.100ಕ್ಕಿಂತ ಹೆಚ್ಚು ಆಮದು ಸುಂಕ ವಿಧಿಸುತ್ತದೆ. ಚೀನಾಗೆ ನಾವು ವಿಧಿಸುವ ಸುಂಕಕ್ಕಿಂತ ಅದು ನಮ್ಮಿಂದ ದುಪ್ಪಟ್ಟು ವಸೂಲಿ ಮಾಡುತ್ತದೆ. ದಕ್ಷಿಣ ಕೊರಿಯಾದ ಸುಂಕವು ಸರಾಸರಿಗಿಂತ ನಾಲ್ಕು ಪಟ್ಟು ಜಾಸ್ತಿಯಾಗಿದೆ. ಹಾಗಾಗಿ, ನಾವು ಕೂಡ ಏಪ್ರಿಲ್ 2ರಿಂದ ಹೆಚ್ಚು ಸುಂಕ ವಿಧಿಸುತ್ತೇವೆ” ಎಂದು ಅಮೆರಿಕ ಸಂಸತ್ತಿನಲ್ಲಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.