ವಾಷಿಂಗ್ಟನ್: ಒಂದು ಕಡೆ ಭಾರತದೊಂದಿಗೆ ವ್ಯಾಪಾರ ಒಪ್ಪಂದದ ಮಾತುಕತೆ ನಡೆಯುತ್ತಿದೆ ಎಂದು ಹೇಳುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್, ಮತ್ತೊಂದು ಕಡೆ ಭಾರತದ ಬೆನ್ನಿಗೆ ಚೂರಿ ಇರಿಯುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ, ರಷ್ಯಾದಿಂದ ತೈಲ ಖರೀದಿಸುತ್ತಿರುವ ದೇಶಗಳ ಮೇಲೆ, ವಿಶೇಷವಾಗಿ ಭಾರತ ಮತ್ತು ಚೀನಾವನ್ನು ಗುರಿಯಾಗಿಸಿಕೊಂಡು ದಂಡನಾತ್ಮಕ ಸುಂಕಗಳನ್ನು ವಿಧಿಸುವಂತೆ ಅಮೆರಿಕವು ತನ್ನ ಜಿ7 (ಗ್ರೂಪ್ ಆಫ್ ಸೆವೆನ್) ಪಾಲುದಾರ ರಾಷ್ಟ್ರಗಳನ್ನು ಒತ್ತಾಯಿಸಿದೆ. ಈ ದೇಶಗಳು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸುವ ಮೂಲಕ ಉಕ್ರೇನ್‌ನಲ್ಲಿನ ಮಾಸ್ಕೋದ ಯುದ್ಧ ಪ್ರಯತ್ನಕ್ಕೆ ಕುಮ್ಮಕ್ಕು ನೀಡುತ್ತಿವೆ ಎಂದೂ ಅಮೆರಿಕ ಆರೋಪಿಸಿದೆ.
ಶುಕ್ರವಾರ ಜಿ7 ರಾಷ್ಟ್ರಗಳ ಹಣಕಾಸು ಸಚಿವರೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ, ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಮತ್ತು ವಾಣಿಜ್ಯ ಪ್ರತಿನಿಧಿ ಜೇಮಿಸನ್ ಗ್ರೀರ್, ರಷ್ಯಾದ ಇಂಧನ ಆದಾಯವನ್ನು ಕಡಿತಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಕ್ರಮ ಕೈಗೊಳ್ಳಬೇಕು, ಆಗ ಮಾತ್ರ ಯುದ್ಧವನ್ನು ಕೊನೆಗೊಳಿಸಲು ಸಾಧ್ಯ ಎಂದು ಎಚ್ಚರಿಸಿದ್ದಾರೆ.
ಒಗ್ಗಟ್ಟಿನ ಹೋರಾಟಕ್ಕೆ ಕರೆ:
“ಪುಟಿನ್ ಅವರ ಯುದ್ಧ ಯಂತ್ರಕ್ಕೆ ಹಣಕಾಸು ಒದಗಿಸುವ ಆದಾಯದ ಮೂಲವನ್ನು ಕಡಿತಗೊಳಿಸಲು ಒಗ್ಗಟ್ಟಿನ ಪ್ರಯತ್ನ ಮಾಡಬೇಕಿದೆ. ಹಾಗೆ ಮಾಡಿದರೆ ಮಾತ್ರವೇ ನಾವು ಈ ಅರ್ಥಹೀನ ಹತ್ಯೆಯನ್ನು ಕೊನೆಗೊಳಿಸಲು ಬೇಕಾದ ಆರ್ಥಿಕ ಒತ್ತಡವನ್ನು ಹೇರಲು ಸಾಧ್ಯ” ಎಂದು ಬೆಸೆಂಟ್ ಮತ್ತು ಗ್ರೀರ್ ಸಭೆಯ ನಂತರ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತದ ಮೇಲೆ ಶೇ. 50ರಷ್ಟು ಸುಂಕ:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಭಾರತದ ವಸ್ತುಗಳ ಆಮದುಗಳ ಮೇಲೆ ಹೆಚ್ಚುವರಿಯಾಗಿ ಶೇ.25 ಸುಂಕವನ್ನು ವಿಧಿಸಿದ್ದು, ಇದರೊಂದಿಗೆ ಒಟ್ಟು ದಂಡನಾತ್ಮಕ ಸುಂಕವನ್ನು ಶೇ.50ಕ್ಕೆ ಹೆಚ್ಚಿಸಿದ್ದಾರೆ. ರಷ್ಯಾದ ಜತೆಗಿನ ನವದೆಹಲಿಯ ತೈಲ ವ್ಯಾಪಾರವನ್ನು ಹತ್ತಿಕ್ಕುವ ಪ್ರಯತ್ನ ಇದಾಗಿದೆ. ಈ ಕ್ರಮವು ಅಮೆರಿಕ-ಭಾರತ ಸಂಬಂಧಗಳಲ್ಲಿ ಬಿರುಕು ಮೂಡಿಸಿದೆ.
ಆದರೆ, ಬೀಜಿಂಗ್‌ನೊಂದಿಗಿನ ಸೂಕ್ಷ್ಮ ವ್ಯಾಪಾರ ಒಪ್ಪಂದವನ್ನು ಉಳಿಸಿಕೊಳ್ಳುವ ಅಗತ್ಯವನ್ನು ಉಲ್ಲೇಖಿಸಿ, ಅಧ್ಯಕ್ಷ ಟ್ರಂಪ್ ಚೀನಾದ ಆಮದುಗಳ ಮೇಲೆ ಹೊಸ ಸುಂಕಗಳನ್ನು ವಿಧಿಸುವುದರಿಂದ ಹಿಂದೆ ಸರಿದಿದ್ದಾರೆ.



















