ಲಕ್ನೋ : ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಭೀಕರ ಘಟನೆಯೊಂದು ನಡೆದಿದೆ. ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬ ತನ್ನದೇ ಅವಳಿ ಸಹೋದರಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿ, ಬಳಿಕ ತಾಯಿಯ ಬಳಿ ಹೋಗಿ “ನಿಮಗೊಂದು ಸರ್ಪ್ರೈಸ್ ಕಾದಿದೆ” ಎಂದು ಹೇಳಿರುವ ಘಟನೆ ವರದಿಯಾಗಿದೆ.
ಆರೋಪಿಯನ್ನು 25 ವರ್ಷದ ಯೋಗೇಶ್ ಎಂದು ಗುರುತಿಸಲಾಗಿದೆ. ಈತ ತನ್ನ ಜತೆ ಹುಟ್ಟಿದ್ದ ಅವಳಿ ಸಹೋದರಿ ಶೈಲಿ ಎಂಬಾಕೆಯನ್ನು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮಾರಕಾಸ್ತ್ರಗಳಿಂದ ಇರಿದು ಕೊಂದಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಯೋಗೇಶ್ ತನ್ನ ಸಹೋದರಿಯ ದೇಹದ ಮೇಲೆ ಬರೋಬ್ಬರಿ 84 ಬಾರಿ ಇರಿದಿದ್ದಾನೆ ಎನ್ನಲಾಗಿದ್ದು, ಈತನ ಕ್ರೌರ್ಯದ ಪರಮಾವಧಿ ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.
ತಾಯಿಗೆ ‘ಸರ್ಪ್ರೈಸ್’ ಎಂದು ಹೇಳಿದ
ಕೃತ್ಯ ಎಸಗಿದ ನಂತರ ಯೋಗೇಶ್ ಅತ್ಯಂತ ಶಾಂತಚಿತ್ತದಿಂದ ವರ್ತಿಸಿದ್ದಾನೆ. ಮಾರುಕಟ್ಟೆಗೆ ಹೋಗಿದ್ದ ತಾಯಿ ಮನೆಗೆ ಮರಳಿದಾಗ, ಯೋಗೇಶ್ ಅವರ ಬಳಿ ಹೋಗಿ “ನಾನು ನಿಮಗೊಂದು ಸರ್ಪ್ರೈಸ್ ನೀಡುತ್ತೇನೆ, ಕೋಣೆಯೊಳಗೆ ಹೋಗಿ ನೋಡಿ” ಎಂದು ಹೇಳಿದ್ದಾನೆ. ಮಗನ ಮಾತು ನಂಬಿ ಕೋಣೆಯೊಳಗೆ ಹೋದ ತಾಯಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗಳ ಶವ ಕಂಡು ಆಘಾತವಾಗಿದೆ. ಅವರು ಜೋರಾಗಿ ಕಿರುಚಿಕೊಂಡಾಗ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದ್ದಾರೆ.
ಸಹೋದರಿಯನ್ನು ಕೊಂದ ನಂತರ ಯೋಗೇಶ್ ಮನೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಆದರೆ ಆತನಿಗೂ ಗಾಯಗಳಾಗಿದ್ದು, ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣ-ತಂಗಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ, ಇಷ್ಟು ಕ್ರೂರವಾಗಿ ಹತ್ಯೆ ಮಾಡಲು ನಿಖರವಾದ ಕಾರಣವೇನು ಎಂಬುದು ಪೊಲೀಸರ ವಿಚಾರಣೆಯಿಂದ ಹೊರಬರಬೇಕಿದೆ.
ಇದನ್ನೂ ಓದಿ : LPG ಅಭಾವವನ್ನು ನೀಗಿಸುವಂತೆ ಕೇಂದ್ರಕ್ಕೆ ಒತ್ತಾಯ – ಸಿಎಂ ಸಿದ್ದರಾಮಯ್ಯ



















