ಚೆನ್ನೈ: ತಮಿಳುನಾಡಿನಲ್ಲಿ ತ್ರಿಭಾಷಾ ಸೂತ್ರಕ್ಕೆ ಡಿಎಂಕೆ ಸರ್ಕಾರವು ವಿರೋಧ ವ್ಯಕ್ತಪಡಿಸುತ್ತಿದೆ. ಕೇಂದ್ರ ಸರ್ಕಾರದಿಂದ ಹಿಂದಿ ಹೇರಿಕೆಯಾಗುತ್ತಿದೆ ಎಂದು ಆರೋಪ ಮಾಡಿರುವ ಎಂ.ಕೆ.ಸ್ಟಾಲಿನ್ ನೇತೃತ್ವದ ಸರ್ಕಾರವು, ಬಜೆಟ್ ಪ್ರತಿಯಲ್ಲಿ ರೂಪಾಯಿ ಸಿಂಬಲ್ ಅನ್ನೇ ತೆಗೆದುಹಾಕಿದೆ. ಇದರ ಬೆನ್ನಲ್ಲೇ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಮಿಳು ಅತ್ಯಂತ ಸುಮಧುರ ಭಾಷೆ ಎಂದು ಬಣ್ಣಿಸಿದ್ದಾರೆ.
ತಮಿಳುನಾಡಿನ ಚೆನ್ನೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಶ್ವಿನಿ ವೈಷ್ಣವ್ ಮಾತನಾಡಿದರು. ತಮಿಳಿನ ವಣಕ್ಕಂ (ನಮಸ್ಕಾರ) ಎಂದು ಹೇಳುತ್ತಲೇ ಅವರು ಭಾಷಣವನ್ನು ಆರಂಭಿಸಿದರು. “ತಮಿಳು ಅತ್ಯಂತ ಸುಮಧುರ ಭಾಷೆಯಾಗಿದೆ. ನಾನು ಕೂಡ ತಮಿಳಿನ ಮೂರು ಪದಗಳನ್ನು ಕಲಿತಿದ್ದೇನೆ. ವಣಕ್ಕಂ (ನಮಸ್ಕಾರ), ಎಪ್ಪಡಿ ಇರುಕೀಂಗ (ಹೇಗಿದ್ದೀರಿ) ಹಾಗೂ ನಂದ್ರಿ (ಧನ್ಯವಾದಗಳು) ಎಂಬ ಪದಗಳ ಅರ್ಥವು ನನಗೆ ಗೊತ್ತಿದೆ” ಎಂದು ಹೇಳಿದ್ದಾರೆ.
“ನಾನು ಕಾನ್ಪುರದಲ್ಲಿ ಓದುವಾಗ ಪ್ರೊಫೆಸರ್ ಸದಾಗೋಪನ್ ಅವರು ನನಗೆ ತಮಿಳಿನ ಸಂಸ್ಕೃತಿ ಬಗ್ಗೆ ಮಾಹಿತಿ ನೀಡಿದರು. ಉತ್ತರ ಭಾರತದಲ್ಲಿ ತಮಿಳುನಾಡು ಎಂದರೆ ಮಸಾಲೆ ದೋಸೆ ನೆನಪಾಗುತ್ತದೆ. ಆದರೆ, ನನಗೆ ಸದಾಗೋಪನ್ ಅವರು ತಮಿಳು ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಮಾಹಿತಿ ನೀಡಿದರು. ತಮಿಳು ಸುಮಧುರ ಭಾಷೆಯಾಗಿದ್ದು, ಜಗತ್ತಿನಲ್ಲೇ ಅದು ಛಾಪು ಮೂಡಿಸಿದೆ” ಎಂದು ಬಣ್ಣಿಸಿದರು.
“ಜಗತ್ತಿನಲ್ಲೇ ತಮಿಳು ಒಂದು ಅತ್ಯಮೂಲ್ಯ ಆಸ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ ಅವರು ತಮಿಳು ಸೇರಿ ದೇಶದ ಪ್ರತಿಯೊಂದು ಭಾಷೆಗೂ ಮಾನ್ಯತೆ, ಪ್ರಾಧಾನ್ಯತೆ ದೊರೆಯಬೇಕು ಎಂದು ಬಯಸುತ್ತಾರೆ. ಟೆಲಿಕಾಂ ಆ್ಯಂಡ್ ಡೇಟಾ ಪ್ರೊಟೆಕ್ಷನ್ ಲಾ ಕುರಿತ ದಾಖಲೆಯು ಏಕೆ ಬರೀ ಇಂಗ್ಲಿಷ್ ನಲ್ಲಿ ಇರಬೇಕು? ಎಲ್ಲ ಭಾಷೆಗಳಲ್ಲಿ ಏಕೆ ಇರಬಾರದು ಎಂದು ಅದನ್ನು ಎಲ್ಲ ಭಾಷೆಗಳಲ್ಲೂ ಬಿಡುಗಡೆ ಮಾಡಲಾಯಿತು” ಎಂದು ಮಾಹಿತಿ ನೀಡಿದರು.
‘