ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್ಒ) ಸದಸ್ಯರು ಯುಎಎನ್ ಆ್ಯಕ್ಟಿವೇಟ್ ಮಾಡಲು ಅಥವಾ ಹೊಸದಾಗಿ ರಿಜಿಸ್ಟರ್ ಮಾಡಿಕೊಳ್ಳಲು ಉಮಾಂಗ್ ಆ್ಯಪ್ ಅನ್ನು ಬಳಸುವುದು ಕಡ್ಡಾಯ ಎಂಬುದಾಗಿ ಇಪಿಎಫ್ಒ ಹೊಸದಾಗಿ ಆದೇಶ ಹೊರಡಿಸಿದೆ. ಹೊಸ ಆದೇಶವು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಇಪಿಎಫ್ಒ ಸದಸ್ಯರು ಹೊಸ ಆದೇಶವನ್ನು ಪಾಲಿಸಬೇಕಾಗಿದೆ.
ಈಗಷ್ಟೇ ಕಂಪನಿ ಸೇರಿದ ಉದ್ಯೋಗಿಗಳು ಯುಎಎನ್ ಅನ್ನು ಜನರೇಟ್ ಮಾಡಬೇಕಾಗುತ್ತದೆ. ಈಗಾಗಲೇ ಸದಸ್ಯರಾಗಿರುವವರು ಯುಎಎನ್ ಅನ್ನು ಆ್ಯಕ್ಟಿವೇಟ್ ಮಾಡಬೇಕಾಗುತ್ತದೆ. ಈ ಎರಡೂ ಸೇವೆಗಳನ್ನು ಪಡೆಯಲು ಈಗ ಇಪಿಎಫ್ಒ ಸದಸ್ಯರು ಕಡ್ಡಾಯವಾಗಿ ಉಮಾಂಗ್ ಆ್ಯಪ್ ಅನ್ನೇ ಬಳಸಬೇಕು ಎಂದು ಆದೇಶ ಹೊರಡಿಸಿದೆ. ಉಮಾಂಗ್ ಆ್ಯಪ್ ಕೇಂದ್ರ ಸರ್ಕಾರದ್ದಾಗಿರುವ ಕಾರಣ ಇದನ್ನೇ ಬಳಸಲು ತಿಳಿಸಲಾಗಿದೆ.
ಉಮಾಂಗ್ ಆ್ಯಪ್ ನಲ್ಲಿ ಆಧಾರ್ ಆಧಾರಿತ ಫೇಸ್ ಅಥೆಂಟಿಫಿಕೇಶನ್ ಸೌಲಭ್ಯವು ಕೂಡ ಇರುವುದರಿಂದ ಸದಸ್ಯರಿಗೆ ಯುಎಎನ್ ಆ್ಯಕ್ಟಿವೇಟ್ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿದುಬಂದಿದೆ. ಪಿಎಫ್ ಪಾಸ್ ಬುಕ್ ನಲ್ಲಿರುವ ಮೊತ್ತವನ್ನು ಪರಿಶೀಲಿಸಲು, ಪಿಎಫ್ ಹಣವನ್ನು ವಿತ್ ಡ್ರಾ ಮಾಡುವುದಕ್ಕಾಗಿ ಕ್ಲೇಮ್ ಸಲ್ಲಿಸುವುದು ಸೇರಿ ಹಲವು ಕಾರಣಗಳಿಗಾಗಿ ಯುಎಎನ್ ಪ್ರಮುಖವಾಗಿದೆ. ಉಮಾಂಗ್ ಆ್ಯಪ್ ಮೂಲಕವೇ ಇದನ್ನು ಆ್ಯಕ್ಟಿವೇಟ್ ಮಾಡಬಹುದಾಗಿದೆ.
ಉಮಾಂಗ್ ಅಪ್ಲಿಕೇಶನ್ನ ಪೂರ್ತಿ ಹೆಸರು ಯುನಿಫೈಡ್ ಮೊಬೈಲ್ ಅಪ್ಲಿಕೇಶನ್ ಫಾರ್ ನ್ಯೂ-ಏಜ್ ಗವರ್ನನ್ಸ್ ಆಗಿದೆ. ದೇಶದಲ್ಲಿ ಇದನ್ನು ಕೋಟ್ಯಂತರ ಸದಸ್ಯರು ಬಳಸುತ್ತಿದ್ದಾರೆ. ಇಪಿಎಫ್ಒ ದೇಶದಲ್ಲಿ 7 ಕೋಟಿಗೂ ಅಧಿಕ ಸದಸ್ಯರನ್ನು ಹೊಂದಿದೆ. ಪಿಎಫ್ ಕ್ಲೇ ಮ್ ಮಾಡುವುದು ಸೇರಿ ಹತ್ತಾರು ಸೇವೆಗಳಿಗೆ ಇದು ಉತ್ತಮ ವೇದಿಕೆಯೂ ಆಗಿದೆ.