ಕಂಡಿ/ಕೊಲೊಂಬೊ: ಟಿ20 ವಿಶ್ವಕಪ್ 2026ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ರೋಚಕ ಸೋಲು ಅನುಭವಿಸಿದ ಬೆನ್ನಲ್ಲೇ, ತಂಡದ ಒಳಜಗಳ ಬೀದಿಗೆ ಬಂದಿದೆ. ಲಂಕಾದ ಮಾಜಿ ವೇಗಿ ಹಾಗೂ ಹಾಲಿ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಮತ್ತು ನಾಯಕ ದಸುನ್ ಶನಕ ನಡುವೆ ನಡೆದ ಭೀಕರ ವಾಗ್ವಾದದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ಪಾಕಿಸ್ತಾನ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಒಂದು ಹಂತದಲ್ಲಿ ಸೋಲುವ ಸುಳಿಯಲ್ಲಿತ್ತು. ಆದರೆ ನಾಯಕ ದಸುನ್ ಶನಕ ಅಬ್ಬರದ ಬ್ಯಾಟಿಂಗ್ ನಡೆಸಿ ತಂಡವನ್ನು ಗೆಲುವಿನ ಹತ್ತಿರ ತಂದರು. ಕೊನೆಯ ಓವರ್‌ನಲ್ಲಿ ಶಾಹೀನ್ ಅಫ್ರಿದಿ ಎಸೆದ ಮೊದಲ ನಾಲ್ಕು ಎಸೆತಗಳಲ್ಲಿ ಒಂದು ಫೋರ್ ಮತ್ತು ಸತತ ಮೂರು ಸಿಕ್ಸರ್ ಸಿಡಿಸಿದ ಶನಕ ಲಂಕಾ ಅಭಿಮಾನಿಗಳಲ್ಲಿ ಗೆಲುವಿನ ಆಸೆ ಮೂಡಿಸಿದ್ದರು.
ಆದರೆ, ಪಂದ್ಯದ ಗತಿಯೇ ಬದಲಾಗಿದ್ದು ಕೊನೆಯ ಎರಡು ಎಸೆತಗಳಲ್ಲಿ. 5ನೇ ಎಸೆತದಲ್ಲಿ ಶನಕ ಅನಗತ್ಯವಾಗಿ ‘ರ್ಯಾಂಪ್ ಶಾಟ್’ (Ramp Shot) ಆಡಲು ಹೋಗಿ ಎಸೆತವನ್ನು ಮಿಸ್ ಮಾಡಿಕೊಂಡರು. ಕೊನೆಯ ಎಸೆತ ವೈಡ್ ಆಗಬಹುದು ಎಂದು ಬಿಟ್ಟುಕೊಟ್ಟರಾದರೂ ಅಂಪೈರ್ ಅದನ್ನು ವೈಡ್ ನೀಡಲಿಲ್ಲ. ಅಂತಿಮವಾಗಿ ಶ್ರೀಲಂಕಾ 5 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಮಾಲಿಂಗ ಆಕ್ರೋಶಕ್ಕೆ ಕಾರಣವೇನು?
ಪಂದ್ಯ ಮುಗಿದು ಡ್ರೆಸ್ಸಿಂಗ್ ರೂಮ್‌ಗೆ ಮರಳುವಾಗ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಅವರು ಶನಕ ವಿರುದ್ಧ ಕಿಡಿಕಾರಿದರು. “ನೇರ ಬ್ಯಾಟ್‌ನಿಂದ ಚೆಂಡನ್ನು ಮನಬಂದಂತೆ ಬಾರಿಸುತ್ತಿದ್ದಾಗ, ಆ ನಿರ್ಣಾಯಕ ಕ್ಷಣದಲ್ಲಿ ಚಮತ್ಕಾರ ಮಾಡಲು ಹೋಗಿ ‘ಚೀಕಿ ಶಾಟ್’ ಆಡುವ ಅಗತ್ಯವೇನಿತ್ತು?” ಎಂದು ಮಾಲಿಂಗ ತೀವ್ರ ತರಾಟೆಗೆ ತೆಗೆದುಕೊಂಡರು. ಶನಕ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರಾದರೂ, ಮಾಲಿಂಗ ಅವರ ಕೋಪ ತಣ್ಣಗಾಗಲಿಲ್ಲ. ಈ ಇಬ್ಬರ ನಡುವಿನ ಕಟು ಮಾತಿನ ಚಕಮಕಿ ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಶ್ರೀಲಂಕಾ ತಂಡದ ಹೀನಾಯ ಪ್ರದರ್ಶನ
ಈ ಸೋಲಿನೊಂದಿಗೆ ಶ್ರೀಲಂಕಾ ತಂಡವು ಸೂಪರ್-8 ಹಂತದಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಕಂಡು ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ತವರಿನಲ್ಲೇ ನಡೆದ ಪಂದ್ಯಗಳಲ್ಲಿ ಒಂದೂ ಗೆಲುವು ಸಾಧಿಸದ ಲಂಕಾ ತಂಡದ ಬಗ್ಗೆ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಜಿಂಬಾಬ್ವೆ ವಿರುದ್ಧವೂ ಸೋತಿದ್ದ ಲಂಕಾ, ಸತತ ನಾಲ್ಕು ಪಂದ್ಯಗಳ ಸೋಲಿನ ಸರಪಳಿಗೆ ಸಿಲುಕಿದೆ.
ಆತಿಥ್ಯದ ಹಕ್ಕು ಕಳೆದುಕೊಂಡ ಶ್ರೀಲಂಕಾ
ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದ ಕಾರಣ, ಶ್ರೀಲಂಕಾ ಕ್ರಿಕೆಟ್ ಮಂಡಳಿ (SLC) ಸೆಮಿಫೈನಲ್ ಪಂದ್ಯವನ್ನು ಆಯೋಜಿಸುವ ಹಕ್ಕನ್ನು ಕಳೆದುಕೊಂಡಿದೆ. ಈಗ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಮತ್ತೊಂದು ಸೆಮಿಫೈನಲ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇದನ್ನೂ ಓದಿ : ವಿರಾಟ್ ಕೊಹ್ಲಿ ದಾಖಲೆ ಉಡೀಸ್ | ಟಿ20 ವಿಶ್ವಕಪ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಸಾಹಿಬ್ಜಾದಾ ಫರ್ಹಾನ್!



















