ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್ ಟಿಎ) 2024-25ನೇ ಸಾಲಿನ ನೆಟ್ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ugcnet.nta.ac.inಗೆ ಭೇಟಿ ನೀಡಿ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಪರೀಕ್ಷೆಗೆ ಹಾಜರಾದವರಲ್ಲಿ 5,158 ಮಂದಿಗೆ ಜೆಆರ್ ಎಫ್ ಲಭಿಸಿದೆ. ಇದೇ ವರ್ಷದ ಜನವರಿ 3ರಿಂದ 25ರವರೆಗೆ ದೇಶಾದ್ಯಂತ ನೆಟ್ ಪರೀಕ್ಷೆ ನಡೆದಿತ್ತು.
ನೆಟ್ ಪರೀಕ್ಷೆಗೆ ಸುಮಾರು 6,49,940 ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ 5,158 ಜನ ಜೆಆರ್ ಎಫ್ ಪಡೆದಿದ್ದಾರೆ. ಇನ್ನು, 48,161 ಮಂದಿ ಅಸಿಸ್ಟಂಟ್ ಪ್ರೊಫೆಸರ್ ಆಗಲು ಅರ್ಹತೆ ಪಡೆದಿದ್ದಾರೆ. ಒಟ್ಟು 1,14,445 ಅಭ್ಯರ್ಥಿಗಳು ಪಿಎಚ್.ಡಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.
ಜನರಲ್ ಹಾಗೂ ಇಡಬ್ಲ್ಯೂಎಸ್ ವರ್ಗದವರು ನೆಟ್ ಪರೀಕ್ಷೆಯಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲು ಶೇ.40ರಷ್ಟು ಅಗ್ರಿಗೇಟ್ ಅಂಕ ಪಡೆಯಬೇಕು. ಇನ್ನು, ಎಸ್ಸಿ, ಎಸ್ಟಿ, ಒಬಿಸಿ, ಕೆನೆಪದರಕ್ಕೆ ಒಳಪಡದವರು, ತೃತೀಯ ಲಿಂಗಿಗಳು ಶೇ.35ರಷ್ಟು ಅಂಕಗಳನ್ನು ಪಡೆಯಬೇಕು. ಮುಂದಿನ ನೆಟ್ ಪರೀಕ್ಷೆಯು 2025ರ ಜೂನ್ ನಲ್ಲಿ ನಡೆಯಲಿದೆ.